ಶಿವಮೊಗ್ಗ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ

ಶಿವಮೊಗ್ಗ, ಆ. 13: ಯಾವುದೇ ಸೂಚನೆ ನೀಡದೆ ರಸ್ತೆಯಲ್ಲಿಯೇ ಏಕಾಏಕಿ ಲಾರಿ ನಿಲ್ಲಿಸಿದ ಕಾರಣ ನಿಯಂತ್ರಣ ಕಳೆದುಕೊಂಡ ಬೈಕ್ ಲಾರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಜಿಲ್ಲೆಯ ಶಿಕಾರಿಪುರ ಪಟ್ಟಣದ ಎಸ್.ಎಸ್.ರಸ್ತೆಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಶಿಕಾರಿಪುರ ಪಟ್ಟಣದ ವಿನಾಯಕ ನಗರದ ನಿವಾಸಿ ಸ್ವರೂಪ್ ಸ್ಟೀನ್ ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡ ಇವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಡಪಡಿಸಿದ್ದಾರೆ. ಈ ಸಂಬಂಧ ಲಾರಿ ಚಾಲಕನ ವಿರುದ್ದ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಸ್ವರೂಪ್ ಸ್ಟೀನ್‍ರವರು ಶಿವಮೊಗ್ಗದ ರಾಯಲ್ ಆರ್ಕೀಡ್‍ನಲ್ಲಿ ಕೆಲಸ ಮಾಡುತ್ತಿದ್ದರು. ಬೈಕ್‍ನಲ್ಲಿ ಶಿಕಾರಿಪುರದಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ಇವರನ್ನು ಓವರ್ ಟೇಕ್ ಮಾಡಿಕೊಂಡು ಮುಂದೆ ಹೋದ ಲಾರಿ ಚಾಲಕನು, ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಬ್ರೇಕ್ ಹಾಕಿ ಲಾರಿ ನಿಲ್ಲಿಸಿದ್ದು, ಇದರಿದಾಗಿ ಹಿಂಬದಿಯಿಂದ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.







