ಸಿದ್ದಕಟ್ಟೆ: 'ಮಾಧ್ಯಮ ಬರವಣಿಗೆ-ಛಾಯಾ ಪತ್ರಿಕೋದ್ಯಮ' ಕುರಿತು ಕಾರ್ಯಾಗಾರ

ಬಂಟ್ವಾಳ, ಆ. 13: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ, ಲರ್ನರ್ಸ್ ಫೋರಂ ಹಾಗೂ ಪ್ಲೇಸ್‌ಮೆಂಟ್ ಸೆಲ್ ವತಿಯಿಂದ "ಮಾಧ್ಯಮ ಬರವಣಿಗೆ ಹಾಗೂ ಛಾಯಾ ಪತ್ರಿಕೋದ್ಯಮ" ವಿಷಯದ ಕುರಿತು ಎರಡು ದಿನಗಳ ಮಾಹಿತಿ ಕಾರ್ಯಾಗಾರವು ಸೋಮವಾರ ನಡೆಯಿತು.
ಸಿದ್ದಕಟ್ಟೆಯ ಯೋಗೀಶ್ ಶೆಟ್ಟಿಗಾರ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು.
ವರ್ಷ ಕ್ರಿಯೇಷನ್ಸ್‌ನ ಮುಖ್ಯಸ್ಥ, ಪತ್ರಕರ್ತ ಹರೀಶ್ ಕೆ. ಅದೂರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ಇಂದು ಮಾಧ್ಯಮ ಉದ್ಯಮವಾಗಿ ಬೆಳೆಯುತ್ತಿದೆ. ವಿಪುಲ ಉದ್ಯೋಗಾವಕಾಶಗಳು ಈ ಕ್ಷೇತ್ರದಲ್ಲಿದೆ. ಆತ್ಮಸ್ಥೈರ್ಯ ಬುದ್ಧಿಮತ್ತೆಗಳಿಂದ ಉತ್ತಮ ವಿಚಾರಧಾರೆಗಳನ್ನು ಅಳವಡಿಸಿಕೊಂಡು ನಿರ್ಭಿತಿಯಿಂದ ಸಮಾಜಕ್ಕೆ ತಿಳಿಸುವ ಮಹತ್ಕಾರ್ಯ ಮಾಧ್ಯಮಗಳ ಮೂಲಕವಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡುತ್ತಾ ಶ್ರೇಷ್ಠ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯಪೂರಕ ವಿಚಾರಗಳು ಭವಿಷ್ಯದ ಜೀವನ ರೂಪಿಸುವಲ್ಲಿ ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಸಂಯೋಜಕ ವಿನಯ್ ಎಂ.ಎಸ್ ಪ್ರಾಸ್ತಾವಿಸಿದರು. ಈ ಸಂದರ್ಭದಲ್ಲಿ ಛಾಯಾಪತ್ರಕರ್ತ ಅನಿತ್ ಕುಮಾರ್ ಮಾರೂರು ಛಾಯಾ ಪತ್ರಿಕೋದ್ಯಮದ ಕುರಿತು ತರಬೇತಿ ನೀಡಿದರು.
ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ಸಂಚಾಲಕ ಹನುಮಂತಯ್ಯ ಜಿ.ಎಚ್, ಪ್ರಾಧ್ಯಾಪಕ ಸುಂದ್ರೇಶ ಎನ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಶ್ಮಿತಾ, ಪ್ರಣೀತಾ ಪ್ರಾರ್ಥಿಸಿ, ಅಶ್ವಿತಾ ಸ್ವಾಗತಿಸಿ, ಗುರುಪ್ರಸಾದ್ ವಂದಿಸಿ, ಕಾವ್ಯಾ ನಿರೂಪಿಸಿದರು.







