'ಏರ್ ಶೋ’ ಸ್ಥಳಾಂತರಕ್ಕೆ ಬಿಜೆಪಿ ಬಿಡುವುದಿಲ್ಲ: ಯಡಿಯೂರಪ್ಪ
ಗದಗ, ಆ. 13: ಬೆಂಗಳೂರಿನಲ್ಲಿ ನಡೆಯಬೇಕಿದ್ದ ಏರ್ ಶೋ ಯಾವುದೇ ಕಾರಣಕ್ಕೂ ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರ ಆಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏರ್ ಶೋ ಸ್ಥಳಾಂತರ ಮಾಡದಂತೆ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಬಿಜೆಪಿ ಎಲ್ಲ ಸಂಸದರು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಏರ್ ಶೋ ಬಗ್ಗೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಜಿ. ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿದ್ದಾರೆ. ಹೀಗಾಗಿ ಏರ್ ಶೋ ಸ್ಥಳಾಂತರ ಕುರಿತು ಚರ್ಚೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಭತ್ತದ ಪೈರು ನಾಟಿ ಮಾಡುವುದರಿಂದ ರೈತರ ಸಮಸ್ಯಗಳು ಬಗೆಹರಿಯುವುದಿಲ್ಲ. ಕೊಪ್ಪಳ, ರಾಯಚೂರು, ಚಿತ್ರದುರ್ಗ, ಬಳ್ಳಾರಿ ಸೇರಿ 13ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಆವರಿಸಿದೆ. ರಾಜಕೀಯ ಬಿಟ್ಟು ಜನರ ಸಮಸ್ಯೆಗಳಿಗೆ ಮೈತ್ರಿ ಸರಕಾರ ಕೂಡಲೇ ಸ್ಪಂದಿಸಬೇಕೆಂದು ಬಿಎಸ್‌ವೈ ಆಗ್ರಹಿಸಿದರು