ಹಿ.ಪ್ರದೇಶ: ಭಾರೀ ಮಳೆಗೆ ಕೊಚ್ಚಿಹೋದ ಸೇತುವೆ

ಶಿಮ್ಲಾ,ಆ.13: ಹಿಮಾಚಲ ಪ್ರದೇಶದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು,ಕಿನ್ನೌರ್ ಜಿಲ್ಲೆಯಲ್ಲಿ ಸೋಮವಾರ ಸೇತುವೆಯೊಂದು ನೆರೆನೀರಿಗೆ ಕೊಚ್ಚಿಕೊಂಡು ಹೋಗಿದೆ. ಶಿಮ್ಲಾ,ಕಂಗ್ರಾ ಮತ್ತು ಸೋಲನ್‌ಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸಿರುವುದರಿಂದ ಹಲವಾರು ರಸ್ತೆಗಳು ಮುಚ್ಚಲ್ಪಟ್ಟಿವೆ.
ಕಿನ್ನೌರ್‌ನ ರಿಸ್ಪಾ ಸೇತುವೆ ಕೊಚ್ಚಿಕೊಂಡು ಹೋಗಿದ್ದು ತಾತ್ಕಾಲಿಕ ಸೇತುವೆಯನ್ನು ನಿರ್ಮಿಸುವ ಮೂಲಕ ವಾಹನ ಸಂಚಾರವನ್ನು ಸುಗಮಗೊಳಿಸಲು ಜಿಲ್ಲಾಡಳಿತವು ಪ್ರಯತ್ನಿಸುತ್ತಿದೆ.
ಭಾರೀ ಮಳೆಯಿಂದಾಗಿ ಬಿಯಾಸ್ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಮಂಧಿ ಜಿಲ್ಲೆಯ ಪಂದೋಷ್ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಬೆಳಿಗ್ಗೆಯಿಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಹೀಗಾಗಿ ಬಿಯಾಸ್ ನದಿಯ ಬಳಿ ಸುಳಿಯದಂತೆ ಪ್ರವಾಸಿಗಳಿಗೆ ಮತ್ತು ತಗ್ಗುಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಭಾಕ್ರಾ ಬಿಯಾಸ್ ನಿರ್ವಹಣೆ ಮಂಡಳಿಯ ಅಧಿಕಾರಿಗಳು ತಿಳಿಸಿದರು.





