ಮುಂಗಾರು ಮಳೆ, ನೆರೆ : ದೇಶದಲ್ಲಿ 774 ಸಾವು

ಹೊಸದಿಲ್ಲಿ, ಆ.13: ದೇಶದಲ್ಲಿ ಇದುವರೆಗೆ ಮುಂಗಾರು ಮಳೆ ಸಂಬಂಧಿತ ಘಟನೆ ಹಾಗೂ ನೆರೆಹಾವಳಿಯಿಂದ 774 ಮಂದಿ ಸಾವನ್ನಪ್ಪಿದ್ದಾರೆ ಎಂದು ಗೃಹ ಇಲಾಖೆ ರವಿವಾರ ತಿಳಿಸಿದೆ. ಕೇರಳದಲ್ಲಿ 187 ಮಂದಿ, ಉತ್ತರಪ್ರದೇಶದಲ್ಲಿ 171, ಪಶ್ಚಿಮ ಬಂಗಾಲದಲ್ಲಿ 170, ಮಹಾರಾಷ್ಟ್ರದಲ್ಲಿ 139 ಮಂದಿ , ಗುಜರಾತ್‌ನಲ್ಲಿ 52, ಅಸ್ಸಾಂನಲ್ಲಿ 45, ನಾಗಾಲ್ಯಾಂಡ್‌ನಲ್ಲಿ 8 ಮಂದಿ ಮಳೆ ಹಾಗೂ ನೆರೆಹಾವಳಿಗೆ ಬಲಿಯಾಗಿದ್ದಾರೆ ಎಂದು ಗೃಹ ಸಚಿವಾಲಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ(ಎನ್‌ಸಿಇಆರ್) ತಿಳಿಸಿದೆ.
ಅಲ್ಲದೆ ಮಳೆ ಹಾಗೂ ನೆರೆಯಿಂದ ಕೇರಳದಲ್ಲಿ 22 ಮತ್ತು ಪಶ್ಚಿಮ ಬಂಗಾಳದಲ್ಲಿ 5 ಮಂದಿ ನಾಪತ್ತೆಯಾಗಿದ್ದಾರೆ. ಮಳೆ ಸಂಬಂಧಿ ದುರಂತದಲ್ಲಿ 245 ಮಂದಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ 26 ಜಿಲ್ಲೆಗಳು, ಅಸ್ಸಾಂನ 23, ಪ.ಬಂಗಾಳದ 22, ಕೇರಳದ 14, ಉ.ಪ್ರದೇಶದ 12, ನಾಗಾಲ್ಯಾಂಡ್‌ನ 11, ಗುಜರಾತ್‌ನ 10 ಜಿಲ್ಲೆಗಳು ಜಲಪ್ರಳಯದಿಂದ ತತ್ತರಿಸಿವೆ. ಅಸ್ಸಾಂನಲ್ಲಿ 27,552 ಹೆಕ್ಟೇರ್ ಪ್ರದೇಶದ ಬೆಳೆನಾಶವಾಗಿದ್ದು 11.45 ಲಕ್ಷ ಜನತೆ ತೊಂದರೆಗೊಳಗಾಗಿದ್ದಾರೆ. ಅಸ್ಸಾಂನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 15 ತಂಡಗಳನ್ನು(ಒಂದು ತಂಡದಲ್ಲಿ 45 ಸಿಬ್ಬಂದಿಗಳಿದ್ದಾರೆ) ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಉತ್ತರಪ್ರದೇಶದಲ್ಲಿ 8, ಪ.ಬಂಗಾಳದಲ್ಲಿ 8, ಗುಜರಾತ್‌ನಲ್ಲಿ 7, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ 4, ನಾಗಾಲ್ಯಾಂಡ್‌ನಲ್ಲಿ ಒಂದು ತಂಡವನ್ನು ನಿಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.





