ಬೆಂಗಳೂರಿನಲ್ಲೆ ಏರ್ ಶೋ ನಡೆಸುವಂತೆ ಪ್ರಧಾನಿಗೆ ಸಿಎಂ ಪತ್ರ

ಬೆಂಗಳೂರು, ಆ.13: ಬೆಂಗಳೂರಿನಲ್ಲೆ ಏರೋ ಇಂಡಿಯಾ-2019 ವೈಮಾನಿಕ ಪ್ರದರ್ಶನ ನಡೆಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
2017ರ ಫೆಬ್ರವರಿಯಲ್ಲಿ ನಡೆದಿದ್ದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ 51 ದೇಶಗಳ 549 ಜಾಗತಿಕ ಹಾಗೂ ದೇಶಿಯ ಕಂಪೆನಿಗಳು ಪಾಲ್ಗೊಂಡಿದ್ದವು. ಬೆಂಗಳೂರು ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರದ ಪ್ರಮುಖ ತಾಣವಾಗಿದೆ. ಏರ್ ಶೋ ನಡೆಸಲು ಬೆಂಗಳೂರು ಸೂಕ್ತವಾದ ತಾಣವಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ವೈಮಾನಿಕ ಪ್ರದರ್ಶನಕ್ಕೆ ಅಗತ್ಯವಿರುವ ಮೂಲಸೌಕರ್ಯ, ರಸ್ತೆ, ಸಾರ್ವಜನಿಕ ಸೌಲಭ್ಯಗಳು ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ರಾಜ್ಯ ಸರಕಾರ ಮಾಡುತ್ತಿದೆ. ಬೆಂಗಳೂರಿನಲ್ಲಿ ಈ ಹಿಂದೆ ನಡೆದಿರುವ ಎಲ್ಲ ಪ್ರದರ್ಶನಗಳು ಯಶಸ್ವಿಯಾಗಿವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ರಕ್ಷಣಾ ಹಾಗೂ ವೈಮಾನಿಕ ಕೈಗಾರಿಕಾಗಳ ಉತ್ತಮ ಆಯ್ಕೆಯೂ ಇದೇ ಆಗಿದೆ. ರಾಜ್ಯ ಸರಕಾರದಿಂದ ಈ ವೈಮಾನಿಕ ಪ್ರದರ್ಶನದ ಯಶಸ್ಸಿಗಾಗಿ ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುವುದು. ಆದುದರಿಂದ, 2019ರಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಮುಖ್ಯಮಂತ್ರಿ ಕೋರಿದ್ದಾರೆ.





