‘ಏರ್ ಶೋ’ ಸ್ಥಳಾಂತರದ ವಿರುದ್ಧ ಭುಗಿಲೆದ್ದ ಆಕ್ರೋಶ: ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ

ಬೆಂಗಳೂರು, ಆ.13: ಎರಡು ದಶಕಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ ಶೋ’ ಪ್ರಸಕ್ತ ವರ್ಷ ಲಕ್ನೋಗೆ ಸ್ಥಳಾಂತರಗೊಂಡಿರುವ ವಿಚಾರಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಸೋಮವಾರ ನಗರದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಎನ್‌ಎಸ್‌ಯುಐ ನೇತೃತ್ವದಲ್ಲಿ ಏರ್ಪಡಿಸಿದ್ದ, ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ, ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆ ಖಂಡಿಸಿದರು.
ಇಲ್ಲಿನ ಮೌಂಟ್ ಕಾರ್ಮೆಲ್, ಮಹಾರಾಣಿ ಹಾಗೂ ಸರಕಾರಿ ಕಲಾ ಕಾಲೇಜು ಆವರಣದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು, ಯಾವುದೇ ಕಾರಣಕ್ಕೂ ಏರ್ ಶೋ ಸ್ಥಳಾಂತರವಾಗಬಾರದು ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಅಭಿಯಾನಯನ್ನುದ್ದೇಶಿಸಿ ಮಾತನಾಡಿದ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್, ಬೆಂಗಳೂರಿನಲ್ಲಿ 1996ರಿಂದ ಏರ್‌ಶೋ ಪ್ರದರ್ಶನ ನಡೆಯುತ್ತಿದೆ. ಆದರೆ, ಈ ಬಾರಿ ಲಕ್ನೋಗೆ ಸ್ಥಳಾಂತರ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂದ ಅವರು, ಒಂದೊಮ್ಮೆ ಲಕ್ನೋಗೆ ಸ್ಥಳಾಂತರ ಗೊಂಡಿರುವುದು ನಿಜವಾಗಿದ್ದರೆ, ಕರ್ನಾಟಕದಿಂದಲೇ ರಾಜ್ಯಸಭೆಗೆ ನೇಮಕಗೊಂಡ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕನ್ನಡಿಗರಿಗೆ ಮಾಡಿದ ದೊಡ್ಡ ಅವಮಾನ ಎಂದು ಹೇಳಿದರು.
ರಾಜಧಾನಿ ಬೆಂಗಳೂರಿನಲ್ಲಿ ಏರ್ ಶೋ ನಡೆಸಲು ಅಗತ್ಯವಾದ ಎಲ್ಲ ವ್ಯವಸ್ಥೆಗಳಿವೆ. ಇಲ್ಲಿ ಹಲವಾರು ಬಾರಿ ಪ್ರದರ್ಶನ ನಡೆಸಲಾಗಿದೆ. ಆದರೂ, ಸ್ಥಳಾಂತರ ಮಾಡುತ್ತಿರುವ ಹಿಂದೆ ಬಹು ದೊಡ್ಡ ರಾಜಕೀಯ ಅಡಗಿದೆ. ಅಷ್ಟೇ ಅಲ್ಲದೆ, ಎನ್‌ಡಿಎ ಸರಕಾರದ ಅವಧಿಯಲ್ಲಿ ಪ್ರಮುಖ ರಕ್ಷಣಾ ಯೋಜನೆಗಳನ್ನು ಕಳೆದು ಕೊಳ್ಳುವಂತಾಗಿದೆ. ಈ ವಿಷಯದಲ್ಲಿ ರಕ್ಷಣಾ ಸಚಿವರು ತಮ್ಮ ನಿಲುವು ಸ್ಪಷ್ಪಪಡಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆ: ಏರ್ ಶೋ ಸ್ಥಳಾಂತರ ಖಂಡಿಸಿ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಕೆ ಮಾಡಲು ಈ ಏರ್ ಶೋ ಸ್ಥಳಾಂತರಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.







