ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮತ್ತೆ ನಾಲ್ಕು ಸಾಕ್ಷಿಗಳ ವಿಚಾರಣೆ
ಉಡುಪಿ, ಆ.13: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷಿ ವಿಚಾರಣೆಯು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ಮತ್ತೆ ಆರಂಭಗೊಂಡಿದ್ದು, ಇಂದು ನಾಲ್ಕು ಮಂದಿ ಸಾಕ್ಷಿಗಳ ಮುಖ್ಯ ಹಾಗೂ ಪಾಟೀ ಸವಾಲು ನಡೆಯಿತು.
ಸಾಕ್ಷಿಗಳ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಹಾಗೂ ಆರೋಪಿಗಳ ಪರ ವಕೀಲರಾದ ನಾರಾಯಣ ಪೂಜಾರಿ, ಅರುಣ್ ಬಂಗೇರ, ವಿಕ್ರಂ ಹೆಗ್ಡೆ ನಡೆಸಿದರು. ಆ.14ರಂದು ಮತ್ತೆ ನಾಲ್ಕು ಮಂದಿಯ ಸಾಕ್ಷಿ ವಿಚಾರಣೆ ನಡೆಯಲಿದೆ. ಈ ಎರಡು ದಿನ ಸೇರಿದಂತೆ 16 ಹಾಗೂ 18ರಂದು ಒಟ್ಟು 17 ಸಾಕ್ಷಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.
ಪ್ರಕರಣದ ಒಟ್ಟು 167 ಸಾಕ್ಷಿಗಳ ಪೈಕಿ ಈವರೆಗೆ ಪ್ರಮುಖ ಸಾಕ್ಷಿಗಳಾದ ಗುಲಾಬಿ ಶೆಡ್ತಿ, ಪೊಲೀಸ್ ಅಧಿಕಾರಿ ಎಸ್.ವಿ.ಗಿರೀಶ್ ಸೇರಿದಂತೆ ಒಟ್ಟು 15 ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಪ್ರಕರಣದ ಪ್ರಮುಖ ಆರೋಪಿಗಳಾದ ಈಗ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್‌ರನ್ನು ಇಂದು ವಿಚಾರಣೆ ವೇಳೆ ಹಾಜರುಪಡಿಸದೇ ಜೈಲಿನಿಂದಲೇ ವಿಡಿಯೋ ಕಾನ್ಫೆರೆನ್ಸ್ ಮಾಡಲಾಯಿತು. ಸಾಕ್ಷಿ ನಾಶ ಆರೋಪಿಗಳ ಪೈಕಿ ಶ್ರೀನಿವಾಸ್ ಭಟ್ ಅನಾರೋಗ್ಯದ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು.







