ತಮಿಳುನಾಡು:ಫ್ರೆಂಚ್ ಪ್ರವಾಸಿಯ ಹತ್ಯೆ,ಓರ್ವನ ಸೆರೆ

ತಂಜಾವುರು, ಆ.13: ಜಿಲ್ಲೆಯ ಅವಿಕ್ಕೊಟ್ಟೈ ಗ್ರಾಮದಲ್ಲಿ 50ರ ಹರೆಯದ ಫ್ರೆಂಚ್ ಪ್ರವಾಸಿಯನ್ನು ಹತ್ಯೆ ಮಾಡಲಾಗಿದ್ದು,ಆತನ ಸ್ಥಳೀಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ನೀರಾವರಿ ಕಾಲುವೆಯಲ್ಲಿ ಗೋಣಿಚೀಲದಲ್ಲಿ ಸುತ್ತಲಾಗಿದ್ದ ಎಂ.ಪಿಯರೆ ಬೌಷರ್ ನ ಅರೆಬೆಂದಿದ್ದ ಶವವು ರವಿವಾರ ಪತ್ತೆಯಾಗುವುದರೊಂದಿಗೆ ಈ ಕೊಲೆ ಬೆಳಕಿಗೆ ಬಂದಿತ್ತು.
ಗ್ರಾಮದ ನಿವಾಸಿ ತಿರುಮುರುಗನ್(29) ಬಂಧಿತ ಆರೋಪಿಯಾಗಿದ್ದು,ಇತ್ತೀಚಿಗೆ ಮಹಾಬಲಿಪುರಮ್‌ಗೆ ಭೇಟಿ ನೀಡಿದ್ದಾಗ ಬೌಷರ್‌ನೊಂದಿಗೆ ಸ್ನೇಹವುಂಟಾಗಿತ್ತು. ಸ್ವಯಂ ಶರಣಾಗಿದ್ದ ತಿರುಮುರುಗನ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಇಬ್ಬರೂ ಸಲಿಂಗ ಕಾಮ ಸಂಬಂಧ ಹೊಂದಿದ್ದು,ಆರೋಪಿಯ ಆಹ್ವಾನದ ಮೇರೆಗೆ ಬೌಷರ್ ಆ.5ರಂದು ಅವಿಕ್ಕೊಟ್ಟೈಗೆ ಆಗಮಿಸಿದ್ದ. ಕೆಲ ದಿನಗಳ ಹಿಂದೆ ಇಬ್ಬರೂ ಮದ್ಯಪಾನ ಮಾಡುತ್ತಿದ್ದಾಗ,ಜಗಳವುಂಟಾಗಿ ತಿರುಮುರುಗನ್ ಬೌಷರ್‌ನ ಕೊಲೆ ಮಾಡಿದ್ದ. ಬಳಿಕ ಶವವನ್ನು ಸುಟ್ಟು ಹಾಕಲು ಯತ್ನಿಸಿ ಅದನ್ನು ಗೋಣಿಚೀಲದಲ್ಲಿ ಸುತ್ತಿ ಕಾಲುವೆಯಲ್ಲಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದರು.





