ಬಕ್ರೀದ್ ಹಿನ್ನೆಲೆಯಲ್ಲಿ ಗೋಹತ್ಯೆ ತಡೆಯಲು ವಿಎಚ್‌ಪಿ ಆಗ್ರಹ
ಉಡುಪಿ, ಆ.13: ರಾಜ್ಯದಲ್ಲಿ ಆ.22ರಂದು ಆಚರಿಸುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದಂತೆ ಗೋ ಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಉಡುಪಿ ಜಿಲ್ಲೆ ಒತ್ತಾಯಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಹಬ್ಬದ ಸಂದರ್ಭ ನಡೆಯುವ ಅಕ್ರಮ ಗೋ ಸಾಗಾಟ ಹಾಗೂ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಜಿಲ್ಲಾಧಿಕಾರಿ ಗಳಿಗೆ ಪತ್ರದ ಮೂಲಕ ಆದೇಶ ನೀಡಿದೆ. ಕೋರ್ಟ್ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸರಕಾರ ರಚಿಸಿದೆ ಎಂದರು.
ಆದುದರಿಂದ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನೇತೃತ್ವದ ಸಮಿತಿಯ ತರ್ತುಸಭೆಯನ್ನು ಕರೆದು ಸಂಬಂಧ ಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಆ ಮೂಲಕ ಅಕ್ರಮ ಗೋಸಾಗಾಟ ಹಾಗೂ ಹತ್ಯೆಯನ್ನು ತಡೆಯಬೇಕು. ಈ ಸಂಬಂಧ ಆ.17ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಮುಖಂಡ ಸುನೀಲ್ ಕೆ.ಆರ್., ವಿಎಚ್‌ಪಿ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ, ದುರ್ಗಾ ವಾಹಿನಿಯ ಭಾಗ್ಯಶ್ರೀ ಐತಾಳ್ ಉಪಸ್ಥಿತರಿದ್ದರು.







