ಮಾನವೀಯತೆ ಮೆರೆದ ಸಚಿವ ಝಮೀರ್ ಅಹ್ಮದ್

ಬೆಂಗಳೂರು, ಆ.13: ಸಿಮೆಂಟ್ ಮಿಕ್ಸರ್ ಲಾರಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗುವ ಮೂಲಕ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ಹೆಗಡೆ ನಗರ ಸಮೀಪದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಿಂದ ವಿಧಾನಸೌಧದ ಕಡೆಗೆ ಬರುವಾಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಾವೇರಿ ಜಂಕ್ಷನ್ ಬಳಿ ಅಪಘಾತವಾಗಿರುವುದನ್ನು ಕಂಡು ಸ್ಥಳಕ್ಕೆ ಭೇಟಿ ನೀಡಿ, ಆಂಬ್ಯುಲೆನ್ಸ್ ಕರೆಸಿ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲು ಝಮೀರ್ ಅಹ್ಮದ್ ಖಾನ್ ನೆರವಾದರು.
ಅಲ್ಲದೆ, ತಮ್ಮ ಭದ್ರತಾ ಸಿಬ್ಬಂದಿಯನ್ನು ಗಾಯಾಳುಗಳೊಂದಿಗೆ ಆಂಬ್ಯುಲೆನ್ಸ್‌ನಲ್ಲೆ ಆಸ್ಪತ್ರೆಗೆ ಕಳುಹಿಸಿ, ತಕ್ಷಣ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಅಪಘಾತ ಸಂಭವಿಸುತ್ತಿದ್ದಂತೆ ಸಿಮೆಂಟ್ ಮಿಕ್ಸರ್ ಲಾರಿ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಈ ಸಂಬಂಧ ಸದಾಶಿವನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





