ಹನೂರು: ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ

ಹನೂರು,ಆ.13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ವ ಸಹಾಯ ಸಂಘಗಳ ಒಕ್ಕೂಟ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹನೂರು ವಲಯದ ವಿವಿಧ ಕಾರ್ಯಕ್ಷೇತ್ರಗಳು ಸೇರಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಬಾಲಕೃಷ್ಣಗೌಡರವರು ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ಮೂಡಿಬಂದ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದಡಿ ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮಗಳಲ್ಲಿಯೂ ಕೂಡ ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಶುಚಿಗೊಳಿಸುವ ಕಾರ್ಯಕ್ರಮ ನಡೆಯುತ್ತಿದೆ. ಹನೂರು ವಲಯದ 10 ಕಾರ್ಯ ಕ್ಷೇತ್ರಗಳಲ್ಲಿ ಒಂದೊಂದು ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಜನರಿಗೆ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದಲ್ಲದೆ ಸ್ಚಚ್ಚತೆಯ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಲಾಗುತ್ತಿದೆ. ಗ್ರಾಮದ ಶ್ರದ್ಧಾ ಕೇಂದ್ರಗಳನ್ನು, ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಸಿ.ಹೆಚ್.ಎಸ್.ಸಿ ಪ್ರಬಂಧಕರಾದ ಪ್ರದೀಪ್ ಕುಮಾರ್ ಮಾತನಾಡಿ, ಒಂದು ಗ್ರಾಮವು ಸುಭೀಕ್ಷೆಯಿಂದ ಇರಬೇಕಾದರೆ ದೇವಸ್ಥಾನ, ಶಾಲೆ, ಆರೋಗ್ಯ ಕೇಂದ್ರಗಳು ಶುಚಿತ್ವವಾಗಿ ಇರಬೇಕು. ಹೀಗಿದ್ದಾಗ ಆ ಗ್ರಾಮದ ಜನರು ಆರೋಗ್ಯವಂತರಾಗಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಇದು ಒಂದು ದಿನದ ಕಾರ್ಯಕ್ರಮವಾಗದೆ ನಿರಂತರವಾಗಿ ಕಾಪಾಡಿಕೊಂಡು ಬರುವ ಕೆಲಸ ಆಗಬೇಕಾಗಿದೆ ಎಂದರು.
ಈ ಸಂದರ್ಭ ಹನೂರು ಆರ್ ಎಸ್ ದೊಡ್ಡಿಯ ಶ್ರೀ ಜಲಕಂಠೇಶ್ವರ ದೇವಸ್ಥಾನ, ಚಿಗತಪುರದ ಮಜೀದ್ ಇಲಾಹಿ ಮಸೀದಿ, ವೈಶಾಂಪಾಳ್ಯದ ಶ್ರೀ ಶಿವಲಂಕಾರೇಶ್ವರ ದೇವಸ್ಥಾನ, ಚಂಗವಾಡಿಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಪುಷ್ಪಪುರದ ಶ್ರೀ ಮಾರಮ್ಮ ದೇವಸ್ಥಾನ, ಶಾಗ್ಯದ ಶ್ರೀ ಶನೇಶ್ವರ ದೇವಸ್ಥಾನಗಳಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಈ ಸ್ವಚ್ಚತೆ ಕಾರ್ಯಕ್ರಮದಲ್ಲಿ ಊರಿನ ಮುಖಂಡರು, ಪಂ. ಸದಸ್ಯರುಗಳು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸೇವಾಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದರು.







