ನಾನೇ ಮೈಸೂರು ಕ್ಷೇತ್ರದ ಮುಂದಿನ ಸಂಸದ: ಪ್ರತಾಪ್ ಸಿಂಹ

ಮೈಸೂರು,ಆ.13: ಟಿಕೆಟ್ ಗೊಂದಲ ಎನ್ನುವುದು ಸುಳ್ಳು, ಕೇವಲ ಸುದ್ದಿಗಾಗಿ ಏನಾದರೂ ಸೃಷ್ಟಿಸುತ್ತಾರೆ. ನಾನೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮುಂದಿನ ಸಂಸದ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ 28 ಜನ ಸಂಸದರ ರ್ಯಾಂಕಿಂಗ್ ನಡೆಸಿದರೆ ನನ್ನ ಸ್ಥಾನ ತಮಗೆ ತಿಳಿಯಲಿದೆ ಎಂದ ಅವರು, ಯದುವೀರ ಒಡೆಯರ್ ಅವರು ರಾಜಕಾರಣದಲ್ಲಿ ಆಸಕ್ತಿ ಇಲ್ಲವೆಂದು ಹಲವು ಬಾರಿ ಸ್ಪಷ್ಟಪಡಿಸಿದ್ದರೂ ಸಹ ಮಾಧ್ಯಮಗಳು ಸುಳ್ಳು ವದಂತಿ ಹಬ್ಬಿಸುತ್ತಿವೆ ಎಂದು ಕಿಡಿಕಾರಿದರು.
ಬೆಂಗಳೂರು-ಮೈಸೂರು 10 ಲೈನ್ ಹೈವೇ, ರೈಲ್ವೆ ಡಬ್ಲಿಂಗ್, ಮಂಡಕಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ, ಇಎಸ್‍ಐ ಆಸ್ಪತ್ರೆ ಮೇಲ್ದರ್ಜೆಗೇರಿಸಿದ್ದು, ಸಾಫ್ಟವೇರ್ ಪಾರ್ಕ್ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ 11 ಸಾವಿರ ಕೋಟಿ ರೂಗಳ ಅನುದಾನವನ್ನು ತಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೇ ಶಾಸಕ ಹಾಗೂ ಸಂಸದರ ಮಾನದಂಡವಾಗಲಿದ್ದು ಆ ನಿಟ್ಟಿನಲ್ಲಿ ತಾನು ಉತ್ತಮ ಕಾರ್ಯ ನಿರ್ವಹಿಸಿರುವೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸೇರಿದಂತೆ ಕ್ಷೇತ್ರದ ಮತದಾರರ ಬೆಂಬಲ ತನಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಸಂವಿಧಾನ ದೇಶದ ಧರ್ಮಗ್ರಂಥ: ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನವನ್ನು ದೇಶದ ಗ್ರಂಥವೆಂದು ಎಂದು ತಿಳಿಸಿದ್ದು, ಹೀಗಿದ್ದರೂ ಧರ್ಮ ಗ್ರಂಥ, ಸಂವಿಧಾನ ಸುಡುವುದು ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆ.15 ರಂದು ಮಿಡ್ ನೈಟ್ ಫ್ರೀಡಂ ರ್ಯಾಲಿ: ಬಿಜೆಪಿ ಯುವಮೋರ್ಚಾ ವತಿಯಿಂದ 72ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಆ.15ರ ಮಧ್ಯರಾತ್ರಿ 12 ಗಂಟೆಯಿಂದ ಮಿಡ್ ನೈಟ್ ಫ್ರೀಡಂ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಯುವ ಮೋರ್ಚಾದ ರಾಜ್ಯಾದ್ಯಕ್ಷನಾದ ಮೇಲೆ ಕಳೆದ ಎರಡು ಬಾರಿಯೂ ರಾಜಧಾನಿ ಬೆಂಗಳೂರಿನಲ್ಲಿ ಈ ರ್ಯಾಲಿ ನಡೆಸಲಾಗಿದ್ದು, ಇದೇ ಮೊದಲ ಬಾರಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಸೇರಿದಂತೆ ಮೈಸೂರು ನಗರದಲ್ಲಿಯೂ ಈ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ನಗರದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸಂಜೆ 8.30 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೀವನ ಹಾಗೂ ಸಾಧನೆ ಸಂಬಂಧಿಸಿದಂತೆ 'ಹಮ್ ಜೀತೆ ಹೈ' ಎಂಬ ಕಿರುಚಿತ್ರ, ನಂತರ ಚಂದನ್ ಶೆಟ್ಟಿಯವರ ಸಂಗೀತ ಕಾರ್ಯಕ್ರಮವಿರುವುದು. ರಾತ್ರಿ 12 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಿ ನಂತರ ಬೈಕ್ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಗೋಕುಲ್ ಗೋವರ್ಧನ್, ಗೊರೂರು ಶಿವಕುಮಾರ್, ದೇವರಾಜ್, ಕೆ.ಜೆ.ರಮೇಶ್, ರಾಕೇಶ್ ಭಾಗಮಂಡಲ, ಪರಮಶಿವಮೂರ್ತಿ ಸಂಸದರೊಂದಿಗೆ ಹಾಜರಿದ್ದರು.







