ದೇಶದ್ರೋಹಿ ಮನಸ್ಸುಗಳು ಬೆಳೆಯುತ್ತಿವೆ: ಜ್ಞಾನಪ್ರಕಾಶ್ ಸ್ವಾಮೀಜಿ ಆತಂಕ

ಮಂಡ್ಯ, ಆ.13: ಸಂವಿಧಾನದ ಪ್ರತಿಗಳನ್ನೇ ಸುಟ್ಟಾಕುವಷ್ಟು ದೇಶದ್ರೋಹಿ ಮನಸ್ಸುಗಳು ಬೆಳೆಯುತ್ತಿವೆ ಎಂದರೆ ಇದಕ್ಕಿಂತ ದುರಂತ ಬೇಕಿದೆಯೆ ಎಂದು ಮೈಸೂರಿನ ಬಹುಜನ ಪೀಠಾಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ವಿಶ್ವಜ್ಞಾನಿ ಸೇವಾ ಟ್ರಸ್ಟ್, ಬಹುಜನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಜಿಲ್ಲಾ ಬಹುಜನ ವಿದ್ಯಾರ್ಥಿ ಸಂಘ ಮತ್ತು ಎಂ.ಕೃಷ್ಣಮೂರ್ತಿ ಹಿತೈಸಿಗಳ ಬಳಗ ರವಿವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಾಗಾರ ಹಾಗೂ ಭಾರತಾಂಬೆ ಮತ್ತು ಸಂವಿಧಾನ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ಭಾರತೀಯನ ಉದ್ಧಾರ ಮತ್ತು ಉನ್ನತಿಗಾಗಿ ರಚಿತಗೊಂಡ ಸಂವಿಧಾನವನ್ನು ರಕ್ಷಣೆ ಮಾಡಬೇಕಿರುವವರೇ ಸುಟ್ಟಾಕಿದ್ದಾರೆ. ಇಂತಹ ದೇಶದ್ರೋಹಿತನ ಮೆರೆದಿರುವವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮೈಸೂರಿನ ಮಹಾರಾಜ ಕಾಲೇಜಿನ ಸಹಾಯಕ ಪ್ರಧ್ಯಾಪಕ ಬಿಪಿನ್ ನಾಗರಾಜು ಮಾತನಾಡಿ, ಬಹುಜನ ವಿದ್ಯಾರ್ಥಿ ಸಂಘ(ಬಿವಿಎಸ್) ಸ್ಥಾಪನೆಯಾಗಿ ರಾಜ್ಯಾದ್ಯಂತ ಹೊಸ ಆಂದೋಲನವನ್ನೇ ಸೃಷ್ಟಿಸಿದೆ ಎಂದರು.
ಉದ್ಯೋಗ ಸೃಷ್ಟಿ ಸರಕಾರದ ಜವಬ್ದಾರಿಯೇ ಹೊರತು ಸಮಾಜದಲ್ಲ ಎಂಬುದು ಬಿವಿಎಸ್‍ನ ಮೂಲ ಧ್ಯೇಯವಾಗಿದೆ. ಖಾಲಿಬಿದ್ದಿರುವ ಸರಕಾರಿ ಉದ್ಯೋಗಗಳನ್ನು ಭರ್ತಿಮಾಡಿ ಇಲ್ಲಾ ಖುರ್ಚಿ ಖಾಲಿಮಾಡಿ ಎಂಬ ಹೋರಾಟ ಹೊಸ ಇತಿಹಾಸವನ್ನೇ ಸೃಷ್ಟಿಸಿತು ಎಂದು ಅವರು ಶ್ಲಾಘಿಸಿದರು.
ಶಿಬಿರದಲ್ಲಿ 50ಕ್ಕೂ ಹೆಚ್ಚು ಮಂದಿ ದಾನ ಮಾಡಿದ ರಕ್ತವನ್ನು ಮಿಮ್ಸ್‍ನ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ನಿವೃತ್ತ ಕಾರ್ಯಪಾಲಕ ಅಭಿಯಂತರ ಚನ್ನಯ್ಯ ದಂಪತಿಯನ್ನು ಅಭಿನಂದಿಸಲಾಯಿತು.
ಜಿಪಂ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ, ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಶಿವರುದ್ರಯ್ಯ, ವಿಚಾರವಾದಿ ಎಂ.ಕೃಷ್ಣಮೂರ್ತಿ, ಟ್ರಸ್ಟ್ ಅಧ್ಯಕ್ಷ ತಾಳಶಾಸನ ಮೋಹನ್, ವೇದಾಂತ, ಮಲ್ಲಿಕಾರ್ಜುನ್, ಬಿವಿಎಸ್‍ನ ಸಂಯೋಜಕರಾದ ಅಶೋಕಮೌರ್ಯ, ವಜ್ರಮುನಿ, ಪ್ರಮೋದ್, ವಿದ್ಯಾರ್ಥಿ ಸಂಘದ ಏಳುಮಲೈ, ಅಶೋಕ್, ಅನುಪಮ, ಪೂಜಾ ಇತರರಿದ್ದರು.







