ಏರ್ಶೋ ಬೆಂಗಳೂರಿನಲ್ಲೇ ನಡೆಯಲಿದೆ: ಅನಂತಕುಮಾರ್ ಅಭಯ
ಬೆಂಗಳೂರು, ಆ.14: ‘‘ಏಶ್ಯಾದ ಅತ್ಯಂತ ದೊಡ್ಡ ವಾಯು ಪ್ರದರ್ಶನವಾದ ‘ಬೆಂಗಳೂರು ಏರ್ಶೋ’ಉತ್ತರಪ್ರದೇಶದ ಲಕ್ನೋಗೆ ಸ್ಥಳಾಂತರವಾಗುತ್ತದೆ ಎನ್ನುವುದು ಕೇವಲ ಊಹಾಪೋಹ. ಕಳೆದ ಬಾರಿಯೂ ಹೀಗೇಯೇ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಏರ್ ಶೋ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಈ ಬಾರಿಯ ಏರ್ ಶೋ ಬೆಂಗಳೂರಿನಲ್ಲಿಯೇ ನಡೆಯಲಿದೆ’’ಎಂದು ಬೆಂಗಳೂರು ಸಂಸದ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಅಭಯ ನೀಡಿದ್ದಾರೆ.
ರಾಜ್ಯದ ಪ್ರತಿಷ್ಠಿತ ಏರ್ ಶೋ ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಇನ್ನೋರ್ವ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
‘‘ಬೆಂಗಳೂರಿನಲ್ಲೇ ಏರ್ ಶೋ ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಲಾಗುವುದು. ಇದಕ್ಕೆ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಬೇಕಾದ ಅಗತ್ಯವಿದೆ. ಈ ಬಗ್ಗೆ ಕೇಂದ್ರ ನಾಯಕರೊಂದಿಗೆ ಫೋನ್ನಲ್ಲಿ ಮಾತನಾಡಿದ್ದೇನೆ. ರವಿವಾರ ಹೊಸದಿಲ್ಲಿಗೆ ತೆರಳಿ ಮತ್ತೊಮ್ಮೆ ಮಾತನಾಡುತ್ತೇನೆ’’ ಎಂದು ದೇವನಹಳ್ಳಿಯಲ್ಲಿ ಸದಾನಂದ ಗೌಡ ಹೇಳಿದ್ದಾರೆ.