ಕೊಡಗಿನಲ್ಲಿ ನಿಲ್ಲದ ವರುಣನ ಆರ್ಭಟ: ಬಿರುಗಾಳಿ ಮಳೆಗೆ ಧರೆಗುರುಳಿದ ಮರ, ಗುಡ್ಡಗಳು
ಮಡಿಕೇರಿ, ಆ.14: ಕೊಡಗು ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅಬ್ಬರಿಸುತ್ತಿದೆ. ಭಾರೀ ಬಿರುಗಾಳಿ ಮಳೆಗೆ ಗುಡ್ಡ ಹಾಗೂ ಮರಗಳು ಧರೆಗೆ ಉರುಳಿದ್ದು, ಗ್ರಾಮಗಳು ಜಲಾವೃತಗೊಂಡು ದ್ವೀಪದಂತಾಗಿವೆ. ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯವನ್ನು ಕಾವೇರಿ, ಕನ್ನಿಕಾ, ಸುಜ್ಯೋತಿ ನದಿಗಳು ಆವರಿಸಿಕೊಂಡಿದ್ದು, ಈ ಭಾಗದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಕಳೆದ ಮೂರು ದಿನಗಳಿಂದ ಆಶ್ಲೇಷ ಮಳೆಯ ವೇಗ ಗಾಳಿಯೊಂದಿಗೆ ಹೆಚ್ಚಾಗಿದ್ದು, ಕೊಡಗಿನ ಜನ ತತ್ತರಿಸಿ ಹೋಗಿದ್ದಾರೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ. ಪ್ರವಾಹದ ನೀರು ಶ್ರೀಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳನ್ನು ಆವರಿಸಿದೆ. ಕಾವೇರಿಗೆ ಪ್ರತಿದಿನ ಸಲ್ಲಿಸುವ ತೀರ್ಥಪೂಜೆಯನ್ನು ಇಂದು ಮುಂಜಾನೆ ಅರ್ಚಕರು ದೇವಾಲಯದ ಆವರಣದಿಂದಲೇ ಅರ್ಪಿಸಿದರು.
ಪ್ರತಿ ಗಂಟೆ ಗಂಟೆಗೂ ನೀರು ಏರಿಕೆಯಾಗುತ್ತಲೇ ಇದ್ದು, ಭಾಗಮಂಡಲದಲ್ಲಿ ಅಪಾಯದ ಪರಿಸ್ಥಿತಿ ಎದುರಾಗಿದೆ. ಜಿಲ್ಲಾಡಳಿತ ಬೋಟ್ ಹಾಗೂ ರ್ಯಾಫ್ಟಿಂಗ್ ವ್ಯವಸ್ಥೆಯ ಮೂಲಕ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ತ್ರಿವೇಣಿ ಸಂಗಮದಲ್ಲಿರುವ ಪೂಜಾ ಸಾಮಾಗ್ರಿಗಳ ತಾತ್ಕಾಲಿಕ ಮಳಿಗೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಪಕ್ಕದಲ್ಲೇ ಇರುವ ವಾಣಿಜ್ಯ ಮಳಿಗೆಗಳು ಕೂಡ ಜಲಾವೃತಗೊಂಡಿದ್ದು, ಆತಂಕ ಮನೆ ಮಾಡಿದೆ.
ಭಾಗಮಂಡಲ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗುರುಳಿ ವಾಹನ ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಭಾಗಮಂಡಲ, ತಲಕಾವೇರಿ ಭಾಗದ ಎಲ್ಲಾ ಗದ್ದೆಗಳು ಜಲಮಯವಾಗಿದ್ದು, ಕೃಷಿ ಕಾರ್ಯ ಅಸಾಧ್ಯವಾಗಿದೆ. ನದಿ ಪಾತ್ರದ ನಿವಾಸಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಗಮಂಡಲ ಭಾಗದಲ್ಲಿ ಅಲ್ಲಲ್ಲಿ ಬರೆ ಕುಸಿದ ಪ್ರಕರಣಗಳೂ ನಡೆದಿವೆ. ಪ್ರವಾಸಿಗರು ಹಾಗೂ ಭಕ್ತರ ವಾಹನಗಳಿಗೆ ಮುಂಜಾಗೃತಾ ಕ್ರಮವಾಗಿ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ.
ಮಡಿಕೇರಿಯಲ್ಲಿ ಮಳೆ ಹೆಚ್ಚು
ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಪ್ರವಾಹದ ರೀತಿಯಲ್ಲಿ ಹರಿಯುತ್ತಿರುವ ನೀರಿನಿಂದ ಗ್ರಾಮೀಣರು ಮಾತ್ರವಲ್ಲದೆ ಪಟ್ಟಣ ಪ್ರದೇಶದ ಜನರು ಕೂಡ ಕಂಗೆಟ್ಟಿದ್ದಾರೆ. ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನಗಳು ಹಾಗೂ ಪಾದಾಚಾರಿಗಳ ಸಂಚಾರ ದುಸ್ತರವಾಗಿದೆ. ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವ್ಯಾಪಾರ, ವಹಿವಾಟು ಸಂಪೂರ್ಣವಾಗಿ ಕಷ್ಟ, ನಷ್ಟದ ಹಾದಿಯಲ್ಲಿದೆ. ಶೀತಗಾಳಿ ಜೋರಾಗಿ ಬೀಸುತ್ತಿದ್ದು, ಎತ್ತರದ ಪ್ರದೇಶಗಳ ನಿವಾಸಿಗಳು ಬರೆ ಕುಸಿತದಿಂದಾಗಿ ಆತಂಕವನ್ನು ಎದುರಿಸುತ್ತಿದ್ದಾರೆ. ಅಪಾಯದಂಚಿನಲ್ಲಿರುವ ಕೆಲವು ನಿವಾಸಿಗಳಿಗೆ ಗಂಜಿಕೇಂದ್ರಕ್ಕೆ ಸ್ಥಳಾಂತರಗೊಳ್ಳುವಂತೆ ನಗರಸಭೆಯ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.
ರೇಸ್‍ಕೋರ್ಸ್ ರಸ್ತೆಯ ಎಲ್‍ಐಸಿ ಕಚೇರಿ ಬಳಿಯ ತೋಡು ತುಂಬಿ ಹರಿಯುತ್ತಿದ್ದು, ಕಚೇರಿ ಆವರಣಕ್ಕೆ ನೀರು ನುಗ್ಗಿದೆ. ಕಾವೇರಿ ಲೇಔಟ್‍ನಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ಕೆಲವು ಮನೆಗಳು ನೀರು ನುಗ್ಗುವ ಅಪಾಯವನ್ನು ಎದುರಿಸುತ್ತಿವೆ. ಕೊಡವ ಸಮಾಜದ ಬಳಿ ಮರಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬರೆ ಕುಸಿತದಿಂದ ನಗರದ ಖಾಸಗಿ ಬಸ್ ನಿಲ್ದಾಣದ ಗೋಡೆಗೆ ಹಾನಿಯಾಗಿದ್ದು, ಮಣ್ಣು ಬಸ್ ನಿಲ್ದಾಣವನ್ನು ಆವರಿಸಿದೆ. ಪತ್ರಿಕಾ ಭವನ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
ದ್ವೀಪದಂತಾದ ಗ್ರಾಮಗಳು
ಗ್ರಾಮೀಣ ಭಾಗ ಅಕ್ಷರಶ ದ್ವೀಪದಂತಾಗಿದ್ದು, ಗ್ರಾಮಸ್ಥರಿಗೆ ಅಘೋಷಿತ ದಿಗ್ಬಂಧನದಂತಾಗಿದೆ. ಮುಕ್ಕೋಡ್ಲು, ಹಮ್ಮಿಯಾಲ ಭಾಗದ ಜಲಮೂಲಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬರೆಕುಸಿತದ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚಾಗಿದ್ದು, ತೆರವು ಕಾರ್ಯಾಚರಣೆಯೇ ದೊಡ್ಡ ಸವಾಲಾಗಿದೆ. ಮಣ್ಣಿನ ರಾಶಿ ರಸ್ತೆಗಳನ್ನು ಆವರಿಸಿರುವುದರಿಂದ ಗ್ರಾಮಸ್ಥರ ಸಂಚಾರ ಸ್ಥಗಿತಗೊಂಡಿದೆ.
ಪ್ರವಾಹ ಪೀಡಿತ ಕೇರಳಕ್ಕೆ ಸಮೀಪದಲ್ಲೇ ಇರುವ ದಕ್ಷಿಣ ಕೊಡಗಿನ ಸ್ಥಿತಿ ಜಲಪ್ರಳಯದ ಅನುಭವವನ್ನು ನೀಡಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಬಾಳೆಲೆ, ನಿಟ್ಟೂರು ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಈ ಭಾಗದ ಗದ್ದೆಗಳು ಮುಳುಗಡೆಯಾಗಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲೂ ದಾಖಲೆ ಪ್ರಮಾಣದ ಮಳೆಯಾಗುತ್ತಿದ್ದು, ನದಿ, ಹಳ್ಳ, ತೊರೆಗಳು ಉಕ್ಕಿ ಹರಿಯುತ್ತಿವೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಮರಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದ ಪರಿಣಾಮ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಮತ್ತು ಮರಗಳು ಬಿದ್ದ ಪರಿಣಾಮ ಹಲವು ಮನೆಗಳಿಗೆ ಹಾನಿಯಾಗಿದೆ.
ಸುಂಟಿಕೊಪ್ಪ, ಚೆಟ್ಟಳ್ಳಿ ರಸ್ತೆಯಲ್ಲಿ ಭಾರೀ ಗಾತ್ರದ ಮರ ಉರುಳಿ ಬಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಿದ್ದಾಪುರ ವ್ಯಾಪ್ತಿಯಲ್ಲೂ ಗಾಳಿ ಮಳೆಯಾಗುತ್ತಿದ್ದು, ಕರಡಿಗೋಡು ಭಾಗದಲ್ಲಿ ನದಿ ಪ್ರವಾಹದ ರೀತಿಯಲ್ಲಿ ಹರಿಯುತ್ತಿದೆ. ಅಪಾಯದ ಮುನ್ಸೂಚನೆ ಇರುವುದರಿಂದ ಸುತ್ತಮುತ್ತಲ ಗ್ರಾಮದ ನಿವಾಸಿಗಳಿಗೆ ಅಧಿಕಾರಿಗಳು ನೋಟೀಸ್ ನೀಡಿದ್ದು, ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದಾರೆ.
ಸಿದ್ದಾಪುರದಲ್ಲಿ ಕಾರು ಜಖಂ
ಸಿದ್ದಾಪುರ ಸುತ್ತಮುತ್ತ ಸುರಿದ ಗಾಳಿ ಮಳೆಗೆ ಮರ ಬಿದ್ದು ಕಾರೊಂದು ಜಖಂಗೊಂಡಿದ್ದು, ಎರಡು ಮನೆಗಳಿಗೂ ಹಾನಿಯಾಗಿದೆ. ಕೂಡುಗದ್ದೆಯ ನಿವಾಸಿ ಸುನಿಲ್ ಎಂಬುವವರ ಮನೆಯ ಮುಂದೆ ನಿಲ್ಲಿಸಿದ ಕಾರಿನ ಮೇಲೆ ಭಾರೀ ಗಾತ್ರದ ಮರ ಬಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಪಕ್ಕದ ಎರಡು ಮನೆಗಳಿಗೆ ಹಾನಿಯಾಗಿದ್ದು, ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಡಿಕೇರಿ ಮುಖ್ಯ ರಸ್ತೆಯ ಕಾನನ ಕಾಡಿನಲ್ಲಿ ರಸ್ತೆಗೆ ಮರ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಿರಾಜಪೇಟೆ ರಸ್ತೆಯ ಬೇತ್ರಿ ಸೇತುವೆಯ ಮೇಲೆಯೇ ಕಾವೇರಿ ನದಿ ನೀರು ಹರಿಯುತ್ತಿದೆ.
ಬಂಡೆ ಕಲ್ಲು ಉರುಳಿ ಹಾನಿ
ಬೃಹತ್ ಗ್ರಾತದ ಬಂಡೆ ಕಲ್ಲು ಉರುಳಿ ಬಿದ್ದು ಮನೆ ಸಂಪೂರ್ಣ ಹಾನಿಗೊಂಡ ಘಟನೆ ಹೊದ್ದೂರು ಗ್ರಾಮದಲ್ಲಿ ನಡೆದಿದೆ. ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಅಯ್ಯಪ್ಪ ಕಾಲೋನಿ ನಿವಾಸಿ ಬಿ.ಎಸ್. ಶಿವಪ್ಪ ಅವರ ಮನೆಗೆ ಬೃಹತ್ ಗ್ರಾತದ ಬಂಡೆ ಕಲ್ಲು ಉರುಳಿ ಬಿದ್ದು ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಸೋಮವಾರ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಗುಡ್ಡದ ಮೇಲ್ಬಾಗದಲ್ಲಿದ್ದ ಬಂಡೆ ಕಲ್ಲು ಮಣ್ಣು ಸಹಿತ ಜಾರಿ ಬಂದು ಮನೆಗೆ ಅಪ್ಪಳಿಸಿದೆ.
ಸುಮಾರು 200 ಅಡಿಗಳ ಮೇಲ್ಬಾಗದಲ್ಲಿ ಇದ್ದ ಬಂಡೆ ಜಾರಿದ ಪರಿಣಾಮ ಮನೆಯ ಅಡುಗೆ ಕೋಣೆ, ಶೌಚಾಲಯ, ಕೊಟ್ಟಿಗೆ ಹಾಗೂ ಕೊಠಡಿಗಳು ಸಂಪೂರ್ಣ ಹಾನಿಗೊಂಡಿದ್ದು, ಮನೆಯ ಹಂಚು ಹಾಗೂ ಸಿಮೆಂಟ್ ಶೀಟ್‍ಗಳು ಜಖಂಗೊಂಡಿವೆ. ರಾತ್ರಿ ಮನೆಯಲ್ಲಿ ಮಲಗಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಳೆಯ ಆರ್ಭಟಕ್ಕೆ ಮೂರ್ನಾಡು-ಬಲಮುರಿ ರಸ್ತೆ ಸಂರ್ಪಕ ಕಡಿತಗೊಂಡಿದೆ. ಕೋಡಂಬೂರಿನ ಹೊಳೆತೋಡುವಿನಲ್ಲಿ ತೋಡಿನ ನೀರು ಹಾಗೂ ಅಸುಪಾಸಿನ ಗದ್ದೆಯ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಈ ಮಾರ್ಗದಲ್ಲಿ ರಸ್ತೆ ಸಂಚಾರ ಮಂಗಳವಾರ ಬೆಳಗ್ಗೆಯಿಂದ ಸ್ಥಗಿತಗೊಂಡಿದೆ. ವಾಹನಗಳು ಹೊದ್ದೂರು ವಾಟೆಕಾಡು ಮಾರ್ಗವಾಗಿ ಬಲಮುರಿ, ಪಾರಾಣೆಗೆ ಸಂಚರಿಸುತ್ತಿವೆ.
ಬಲಮುರಿಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಕಿರುಸೇತುವೆ ಮೇಲ್ಬಾಗದಲ್ಲಿ ಇಪ್ಪತ್ತು ಅಡಿಗಳಷ್ಟು ನೀರು ಹರಿಯುತ್ತಿದೆ. ಬೇತ್ರಿ ಹಾಗೂ ಮುತ್ತಾರುಮುಡಿ ಕಿರುಹೊಳೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಸಣ್ಣಪುಟ್ಟ ತೋಡುಗಳು ತುಂಬಿ ಹರಿಯುತ್ತಿದ್ದು ಗದ್ದೆಗಳು ನೀರಿನಿಂದ ತುಂಬಿದೆ. ಮೂರ್ನಾಡು-ನಾಪೋಕ್ಲು ರಸ್ತೆಯಲ್ಲಿ ಬೊಳಿಬಾಣೆ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂರ್ಪಕ ಸ್ಥಗಿತಗೊಂಡಿದೆ. ನಾಪೋಕ್ಲು ಸಾಗುವ ವಾಹನಗಳು ಕುಂಬಳದಾಳು ಮಾರ್ಗವಾಗಿ ಸಂಚರಿಸುವಂತಾಗಿದೆ.
ಕಾಫಿ, ಕರಿ ಮೆಣಸು ಕಹಿ
ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ ಹಾಗೂ ಕರಿಮೆಣಸು ಕೃಷಿಗೆ ಅತಿಯಾದ ಮಳೆಯಿಂದ ಕೊಳೆ ರೋಗ ಬಾಧಿಸಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 13 ಇಂಚಿಗೂ ಅಧಿಕ ಮಳೆಯಾಗಿದೆ.
ಮಳೆ ವಿವರ
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 127.10 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ 0.27 ಮಿ.ಮೀ.ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 3097.61 ಮಿ.ಮೀ,ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1368.41 ಮಿ.ಮೀ ಮಳೆಯಾಗಿತ್ತು.