ಮಹಾಮಳೆಗೆ ಮಲೆನಾಡು ತತ್ತರ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ, ಭದ್ರಾ ನದಿಗಳು
ಶೃಂಗೇರಿ- ಮಂಗಳೂರು ಹೆದ್ದಾರಿ ಬಂದ್

ಚಿಕ್ಕಮಗಳೂರು, ಆ.14: ಕಳೆದ 5 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಯ ಅಬ್ಬರಕ್ಕೆ ಜಿಲ್ಲೆಯ ಮಲೆನಾಡು ಭಾಗದ ಜನತೆ ಅಕ್ಷರಶಃ ತತ್ತರಿಸಿದ್ದಾರೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಭಾಗದ ಜೀವನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನದಿಪಾತ್ರದ ತೋಟ, ಹೊಲಗದ್ದೆಗಳಿಗೆ ನೀರು ನುಗಿ ಅಪಾರ ನಷ್ಟ ಸಂಭವಿಸಿದೆ. ಸತತ ಮಳೆಗೆ ಜಿಲ್ಲೆಯ ಹಲವೆಡೆ ರಸ್ತೆ ಸಂಚಾರ ಬಂದ್ ಆಗಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಮಲೆನಾಡಿನ ಬಹುತೇಕ ಗ್ರಾಮಗಳು ಕಳೆದೆರಡು ದಿನಗಳಿಂದ ವಿದ್ಯುತ್ ಇಲ್ಲದೇ ಕತ್ತಲೆಯಲ್ಲಿ ಮುಳುಗಿದೆ.
ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಕಳೆದ 5 ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದ್ದು, ಅತೀವೃಷ್ಟಿಯಿಂದಾಗಿ ಇಲ್ಲಿನ ಪ್ರಮುಖ ನದಿಗಳಾದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳೂ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ನದಿ ಪಾತ್ರದ ಅಡಿಕೆ ತೋಟ, ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು, ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.
ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಚಾರ್ಮಾಡಿ ಘಾಟ್‍ನಲ್ಲಿ ಮಂಜು ಕವಿದ ವಾತಾವರಣದಿಂದಾಗಿ ಪ್ರವಾಸಿಗರ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ತಾಲೂಕು ವ್ಯಾಪ್ತಿಯಲ್ಲಿರುವ ಚಿನ್ನಿಗ ಗ್ರಾಮದಲ್ಲಿ ತಡ ರಾತ್ರಿ ಸುರಿದ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡವೊಂದು ಮಂಗಳವಾರ ಬೆಳಗ್ಗೆ ಕುಸಿದು ಬಿದ್ದಿದೆ. ಮಂಗಳವಾರ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಮಕ್ಕಳು ಇರಲಿಲ್ಲ. ಇದರಿಂದಾಗಿ ಸಂಭವಿಸಲಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ತಾಲೂಕಿನ ಉದುಸೆ ಗ್ರಾಮದಲ್ಲಿ ಹೇಮಾವತಿ ನದಿಯ ಆರ್ಭಟಕ್ಕೆ ಅಕ್ಕಪಕ್ಕದ ಕಾಫಿ, ಅಡಿಕೆ ತೋಟ ಹಾಗೂ ಭತ್ತ, ಶುಂಠಿ ಗದ್ದೆಗಳಿಗೂ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.
12 ನೇ ಬಾರಿ ಮುಳುಗಿದ ಹೆಬ್ಬಾಳೆ ಸೇತುವೆ:
ತಾಲೂಕಿನ ಕಳಸ ಹೋಬಳಿಯಾದ್ಯಂತ ಮಹಾಮಳೆ ಅನಾಹುತಗಳನ್ನೇ ಸೃಷ್ಟಿಸುತ್ತಿದ್ದು, ಇಲ್ಲಿನ ಭದ್ರಾನದಿ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭದ್ರಾನದಿ ಸೇರಿದಂತೆ ಹೋಬಳಿ ಬಹುತೇಕ ಹಳ್ಳಕೊಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಭದ್ರಾನದಿಯಲ್ಲಿ ನೀರಿನ ಹರಿವು ಹೆಚ್ಚಿದ ಪರಿಣಾಮ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ 12ನೇ ಬಾರಿಗೆ ಮುಳುಗಡೆಯಾಗಿದೆ. ಪರಿಣಾಮ ಹೊರನಾಡು ಪ್ರವಾಸಿಗರು ಹೆಬ್ಬಾಳೆ ಸೇತುವೆ ಮೂಲಕ ವಾಹನ ಸಂಚಾರ ಮಾಡದಂತೆ ಸ್ಥಳೀಯ ಪೊಲೀಸರು ನಿಷೇಧ ಹೇರಿದ್ದಾರೆ. ಸೇತುವೆ ಮುಳುಗಡೆಯಾದ ಪರಿಣಾಮ ಪ್ರವಾಸಿಗರ ವಾಹನಗಳು ಸೇತುವೆಯ ಎರಡೂ ಬದಿಯಲ್ಲಿ ಠಿಕಾಣಿ ಹೂಡಿದ್ದ ದೃಶ್ಯಗಳು ಕಂಡು ಬಂದವು. ಪ್ರವಾಸಿಗರಿಗೆ ಬದಲಿ ಮಾರ್ಗವಾದ ಹಳುವಳ್ಳಿ ಮೂಲಕ ಹೊರನಾಡು ದೇವಾಲಯ ಸಂಪರ್ಕಕ್ಕೆ ವ್ಯವಸ್ಥೆ ಮಾಡಲಾಗಿದೆ. ಭದ್ರಾ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದ್ದು, ಈ ಭಾಗದಲ್ಲಿ ಕಂದಾಯಾಧಿಕಾರಿಗಳು ಹಾಗೂ ಪೊಲೀಸರು ಅಹಿತಕರ ಘಟನೆಗಳ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಿದ್ದಾರೆ.
ಶೃಂಗೇರಿ- ಮಂಗಳೂರು ಹೆದ್ದಾರಿ ಬಂದ್:
ಶೃಂಗೇರಿ ತಾಲೂಕಿನಾದ್ಯಂತ ಕಳೆದ 5 ದಿನಗಳಿಂದ ರಾತ್ರಿ ಹಗಲೆನ್ನದೇ ನಿರಂತರ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ತಾಲೂಕಿನ ನೆಮ್ಮಾರು, ಕೆರೆಕಟ್ಟೆ ಮೂಲಕ ಹಾದು ಹೋಗಿರುವ ಶೃಂಗೇರಿ-ಮಂಗಳೂರು ಸಂಪರ್ಕದ ರಾಜ್ಯ ಹೆದ್ದಾರಿ ಬಂದ್ ಆಗಿದ್ದು, ಖಾಸಗಿ ಸಾರಿಗೆ ಬಸ್‍ಗಳೂ ಸೇರಿದಂತೆ ಪ್ರವಾಸಿಗರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ರವಿವಾರ ಹಾಗೂ ಸೋಮವಾರ ತಾಲೂಕಿನಾದ್ಯಂತ ಮಳೆಯಾದ ಪರಿಣಾಮ ತುಂಗಾ ನದಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದ್ದು, ಪರಿಣಾಮ ಶೃಂಗೇರಿ ಪಟ್ಟಣ ಬಹುತೇಕ ಜಲಾವೃತಗೊಂಡಿದೆ. ಶಾರದಾಂಬೆ ದೇವಾಲಯದ ಮೆಟ್ಟಿಲುಗಳು ನೀರಿನಲ್ಲಿ ಮುಳುಗಡೆಯಾಗಿವೆ. ಸಮೀಪದ ಕಪ್ಪೆಶಂಕರ ದೇವಾಲಯ, ಮಠದ ಸಂದ್ಯಾವಂಧನೆ ಮಂಟಪ ಮುಳುಗಡೆಯಾಗಿವೆ. ಪಟ್ಟಣದ ಗಾಂಧಿಮೈದಾನ ಸಂಪೂರ್ಣವಾಗಿ ಜಲಾವೃತಗೊಂಡಿರುವುದರಿಂದ ಪ್ರವಾಸಿಗರ ವಾಹನ ನಿಲುಗಡೆಗೆ ಪರದಾಡುವಂತಾಗಿದೆ. ಗಾಂಧಿಮೈದಾನ ಸಂಪರ್ಕದ ಪ್ಯಾರಲಾಲ್ ರಸ್ತೆಯೂ ನದಿ ನೀರಿನಲ್ಲಿ ಮುಳುಗಿದ್ದು, ಇಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರವನ್ನು ಪೊಲೀಸರು ನಿಷೇದಿಸಿದ್ದಾರೆ.
ಇನ್ನು ಕೊಪ್ಪ ತಾಲೂಕು ವ್ಯಾಪ್ತಿಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಮಂಗಳವಾರ ಬೆಳಗ್ಗೆ ತಾಲೂಕಿನ ಆರ್ಡಿಕೊಪ್ಪ ಎಂಬಲ್ಲಿ ತುಂಗಾ ನದಿಯ ನೆರೆನೀರು ಹರಿದು ಬಂದ ಪರಿಣಾಮ ಕೊಪ್ಪ, ಜಯಪುರ ಮಾರ್ಗವಾಗಿ ಬಾಳೆಹೊನ್ನೂರು, ಚಿಕ್ಕಮಗಳೂರು ಸಂಪರ್ಕಿಸುವ ಹೆದ್ದಾರಿ ಸುಮಾರು 3 ಗಂಟೆಗೂ ಹೆಚ್ಚು ಕಾಲ ಬಂದ್ ಆಗಿತ್ತು. ಈ ವೇಳೆ ಪೊಲೀಸರು ಎರಡೂ ಕಡೆಗಳಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸಿದ್ದರು. ಸಂಜೆಯ ವೇಳೆಗೆ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನಾರಂಭಗೊಂಡಿತ್ತು. ಇನ್ನು ತಾಲೂಕಿನ ಜಯಪುರ ಸಮೀಪದ ಕೂಳೂರು ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, 20 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲೂ ಭಾರೀ ಮಳೆ ಸುರಿಯುತ್ತಿರುವುದರಿಂದ ಈ ಭಾಗದ ಹಳ್ಳಕೊಳ್ಳಗಳೂ ತುಂಬಿಹರಿಯುತ್ತಿವೆ. ತಾಲೂಕಿನ ಶೆಟ್ಟಿಕೊಪ್ಪ, ನೇರಳಕೊಪ್ಪ ಗ್ರಾಮಗಳಲ್ಲಿ ಹರಿಯುವ ಬಣಗಿಹಳ್ಳಿದ ನೀರಿನಲ್ಲಿ ಕರುವೊಂದು ಕೊಚ್ಚಿ ಹೋದ ಘಟನೆ ವರದಿಯಾಗಿದೆ.
ಉಳಿದಂತೆ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಗಿರಿ ಶ್ರೇಣಿಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರುವುದರಿಂದ ಪದೇಪದೇ ಗುಡ್ಡ ಕುಸಿದು ದತ್ತಪೀಠ, ಮುಳ್ಳಯ್ಯನ ಗಿರಿ ಸಂಪರ್ಕದ ರಸ್ತೆಗಳಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಕಡೂರು, ತರೀಕೆರೆ ವ್ಯಾಪ್ತಿಯಲ್ಲೂ ರವಿವಾರದಿಂದ ಉತ್ತಮ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದ್ದು, ಜಿಲ್ಲೆಯ ಮಲೆನಾಡು ಭಾಗ ಮಾತ್ರ ಮಹಾಮಳೆಗೆ ತತ್ತರಗೊಂಡಿದೆ.







