ಬಿಹಾರ ಆಶ್ರಯ ಧಾಮದಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಹಾಜಿಪುರ್ ಡಿಪಿಒ ಬಂಧನ

ಹಾಜಿಪುರ್ (ಬಿಹಾರ್), ಆ. 14: ನಗರದಲ್ಲಿರುವ ಆಶ್ರಯಧಾಮವೊಂದರಲ್ಲಿ ಬಾಲಕಿಯರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಹಾಜಿಪುರದ ಜಿಲ್ಲಾ ಪ್ರಭಾರ ಅಧಿಕಾರಿ ಮನಮೋಹನ್ ಪ್ರಸಾದ್ ಸಿಂಗ್ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆಶ್ರಯ ಧಾಮಕ್ಕೆ ಸಿಂಗ್ ಆಗಾಗ ಭೇಟಿ ನೀಡುತ್ತಿದ್ದ ಹಾಗೂ ಅಲ್ಲಿರುವ ಬಾಲಕಿಯರು ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಬಲವಂತ ಮಾಡುತ್ತಿದ್ದ. ಇದರ ವಿರುದ್ಧ ಮಾತನಾಡಿದರೆ ಥಳಿಸುವ ಬೆದರಿಕೆ ಒಡ್ಡುತ್ತಿದ್ದ ಎಂದು ಆಶ್ರಯಧಾಮದ ಸಂತ್ರಸ್ತರು ಆರೋಪಿಸಿದ್ದಾರೆ. ಸಿಂಗ್‌ಗೆ ಸಹಕರಿಸದ ಹಿನ್ನೆಲೆಯಲ್ಲಿ ನನಗೆ ಥಳಿಸಿದ್ದ ಎಂದು ಆಶ್ರಯಧಾಮದ ಓರ್ವ ಬಾಲಕಿ ಆರೋಪಿಸಿದ್ದಾರೆ. ಆತ ನನ್ನ ಬಟ್ಟೆಯನ್ನು ಹರಿದಿದ್ದ ಎಂದು ಇನ್ನೋರ್ವ ಬಾಲಕಿ ಆಪಾದಿಸಿದ್ದಾರೆ. ತನಿಖೆಯ ನೆಪದಲ್ಲಿ ಸಿಂಗ್ ಆಗಾಗ ನಮ್ಮ ಕೊಠಡಿಗೆ ಬರುತ್ತಿದ್ದರು ಹಾಗೂ ಕೈ, ಕಾಲುಗಳಿಗೆ ಮಸಾಜ್ ಮಾಡುವಂತೆ ಹೇಳುತ್ತಿದ್ದರು. ಅನಂತರ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಿದ್ದರು ಎಂದು ಬಾಲಕಿಯರು ಆರೋಪಿಸಿದ್ದಾರೆ.
Next Story





