ಚಾಮರಾಜನಗರ: ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಧರಣಿ
ಚಾಮರಾಜನಗರ,ಆ.14: ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ಕಾವೇರಿ ನೀರಾವರಿ ನಿಗಮ ಕಚೇರಿ ಮುಂಬಾಗ ಯಳಂದೂರು ಮತ್ತು ಕೊಳ್ಳೇಗಾಲ ಭಾಗದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಈ ಭಾಗದಲ್ಲಿ ಕೃಷಿಯನ್ನೇ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿದ್ದು, ರೈತರು ಎರಡು ಬಾರಿ ಗದ್ದೆಯನ್ನು ಉಳುಮೆ ಮಾಡಿ, ಕನಿಷ್ಟ ಬತ್ತನಾಟಿ ನಾಡಲು 60 ದಿನವಾದರೂ ನೀರು ಬಿಡಬೇಕು. ಆದರೆ ಅಧಿಕಾರಿಗಳು ನೀರು ಬಿಡದೆ ರೈತರ ಜೊತೆ ಚೆಲ್ಲಾಟವಾಡುತ್ತಿದ್ದು, ಅಧಿಕಾರಿಗಳು ರೈತರಿಗೆ ಯಾವುದೇ ರೀತಿ ಮಾಹಿತಿ ಕೊಡದೆ ಮೋಸ ಮಾಡುತ್ತಿದ್ದಾರೆ. ದಿನಕ್ಕೆ ಒಂದೂವರೆ ಲಕ್ಷ ಕ್ಯೂಸೆಕ್ಸ್ ನೀರು ಬಿಡುತ್ತಿದ್ದು, ನಾಲೆಗಳಿಗೆ ನೀರು ಬಿಡಲು ತಕರಾರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಕೆರೆಗಳಿಗೆ ನೀರು ತುಂಬದೇ ತೊಂದೆರೆಯಾಗುತ್ತಿದೆ ಹಾಗೂ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತೆ ಎಂದು ತಿಳಿಸಿದರು.
ಇದೇ ಸಂದರ್ಭ ಸುತ್ತಮುತ್ತಲಿನ ರೈತ ಮುಖಂಡರುಗಳು ಭಾಗವಹಿಸಿದ್ದರು. ಸ್ಥಳದಲ್ಲಿ ಸಹಾಯಕ ಕಾರ್ಯಪಾಲಕ ಆಭಿಯಂತರ ಆರ್ ಸಿ ಕೆಂಪರಾಜು, ಹಾಗೂ ಕೊಳ್ಳೇಗಾಲ ವಿಭಾಗದ ಪ್ರಭಾರ ಕಾರ್ಯಪಾಲಕ ಅಭಿಯಂತ ಪ್ರಶಾಂತ್ ಹಾಗೂ ನರಸೀಪುರ ವಿಭಾಗದ ಪ್ರಭಾರ ಕಾರ್ಯಪಾಲಕ ಅಭಿಯಂತರ ವರದರಾಜು ಹಾಜರಿದ್ದರು.







