ಕಮಿಷನ್ ಸಚಿವರನ್ನು ಸಂಪುಟದಿಂದ ಕೈಬಿಡಿ: ಎನ್.ಆರ್.ರಮೇಶ್
ಸಚಿವ ಜಾರ್ಜ್ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು, ಆ.14: ಸಚಿವ ಕೆ.ಜೆ.ಜಾರ್ಜ್ 250 ಕೋಟಿ ರೂ. ಹಣ ವಂಚಿಸಿ 50 ಕೋಟಿ ರೂ. ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್, ಅವರನ್ನು ಈ ಕೂಡಲೇ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ವಿಧಾನಪರಿಷತ್ ಸದಸ್ಯ ಗೋವಿಂದರಾಜ್, ನಿವೃತ್ತ ಐಎಎಸ್ ಅಧಿಕಾರಿ ಶಾಮ್‌ಭಟ್ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ ಎಂದರು.
ಐಟಿಗೆ ದೂರು: ಸರಕಾರಿ ಸೊತ್ತುಗಳನ್ನು ಸಕ್ರಮಗೊಳಿಸಿಕೊಳ್ಳಲು ಎಂಎಸ್‌ಇ ಕಂಪೆನಿಯಲ್ಲಿ 4,729 ಸಹ ಸಂಸ್ಥೆಗಳು ಇರುವಿಕೆಯನ್ನು ತೋರಿಸುವ ಮೂಲಕ ಕೋಟ್ಯಂತರ ರೂಪಾಯಿ ಆದಾಯ ತೆರಿಗೆಯನ್ನು ವಂಚಿಸಿದ್ದಾರೆಂದು ಸಚಿವ ಜಾರ್ಜ್ ವಿರುದ್ಧ ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕರು ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿರುವುದಾಗಿ ಹೇಳಿದರು.
ಇಂದಿರಾನಗರ ಬಿಡಿಎ ವಾಣಿಜ್ಯ ಸಂಕೀರ್ಣ ಸುಪರ್ದಿಗೆ ತೆಗೆದುಕೊಂಡಿರುವುದರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಲಯದ ನಿಯಮವನ್ನು (ಎನ್‌ಜಿಟಿ) ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಸಂಕೀರ್ಣದ ಎದುರು ಭಾಗದಲ್ಲೇ ಕೆರೆ ಇದ್ದು, ಸಂಕೀರ್ಣಕ್ಕೆ ಹೊಂದಿಕೊಂಡಂತೆ ರಾಜಕಾಲುವೆ ಹಾದು ಹೋಗಿದೆ. ಎನ್‌ಜಿಟಿ ಆದೇಶದಂತೆ ಕೆರೆಯ ಗಡಿ ಭಾಗ 75 ಮೀಟರ್ ಸೆಕೆಂಡರಿ ಡ್ರೈನಿಗೆ 50 ಮೀಟರ್ ಭಪರ್ ರೆನ್ ಪ್ರದೇಶವಾಗಿರುತ್ತದೆ. ಇಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಈ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಹೇಗೆ ಲಭಿಸಿತು ಎಂದು ಪ್ರಶ್ನಿಸಿದರು.
ಬಿಡಿಎ ವಾಣಿಜ್ಯ ಸಂಕೀರ್ಣದ ಮರು ನಿರ್ಮಾಣದ ಹೆಸರಿನಲ್ಲಿ 171 ಬೃಹತ್ ಮರಗಳನ್ನು ಕಡಿದು ಹಾಕಲು ನಿರ್ಧರಿಸಲಾಗಿರುವುದು ಖಂಡನೀಯ. ನಗರ ಪ್ರದೇಶಗಳಲ್ಲಿ ಜಾರಿ ಇರುವ ನಿಯಮದಂತೆ ಯಾವುದೇ ಕಟ್ಟಡ ನಿರ್ಮಾಣಗಾರರು ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸುವ ವಸತಿ ಸಮುಚ್ಛಯಗಳಾಗಲಿ, ವಾಣಿಜ್ಯ ಸಂಕೀರ್ಣಗಳಾಗಲಿ ಒಪ್ಪಂದ ಮಾಡಿಕೊಂಡ ಸೊತ್ತಿನ ಮಾಲಕನಿಗೆ ಆತನ ಸ್ವತ್ತಿನ ಮಾರುಕಟ್ಟೆ ಬೆಲೆಯ ಶೇ.15ರಿಂದ 20ರಷ್ಟು ವಹಿವಾಟಿನ ವರ್ಗಾವಣೆ ಹಕ್ಕು ರೂಪದಲ್ಲಿ ನೀಡಬೇಕಾಗುತ್ತದೆ. ಆದರೆ, ಈ ಟೆಂಡರ್ ಅನುಮೋದನೆ ಪಡೆದುಕೊಂಡಿರುವ ಎಂಬೆಸ್ಸಿ ಸಂಸ್ಥೆ ಟೆಂಡರ್ ಷರತ್ತುಗಳಲ್ಲಿ ಗುಡ್‌ವಿಲ್ ಅಂಶವನ್ನೇ ಸೇರಿಸಿಲ್ಲ ಎಂದು ದೂರಿದರು.
ಈ ಮುಖಾಂತರ ಬಿಡಿಎಗೆ ಪಾವತಿಸಬೇಕಾಗಿದ್ದ 100ಕೋಟಿ ರೂ.ಗಳಷ್ಟು ಹಣದ ಪೈಕಿ ಶೇ.50ರಷ್ಟು ಹಣವನ್ನು ತಮ್ಮದೇ ಪಾಲುದಾರಿಕೆಯ ಎಂಬೆಸ್ಸಿ ಸಂಸ್ಥೆಯಿಂದ ಸ್ವತಃ ಜಾರ್ಜ್ ಹಾಗೂ ಗೋವಿಂದರಾಜು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ವಸತಿ ವಾಣಿಜ್ಯ ಸಮುಚ್ಚಯಗಳ ಜಂಟಿ ಸಹಭಾಗಿತ್ವದಲ್ಲಿ ಮಾಲಕತ್ವದ ಪಾಲುದಾರಿಕೆ 50:50ರ ಅನುಪಾತದಲ್ಲಿರುತ್ತದೆ. ಆದರೆ, ಈ ಯೋಜನೆಯಲ್ಲಿ ಜಾರ್ಜ್ ಅಧಿಕಾರ ದುರುಪಯೋಗ ಪಡಿಸಿಕೊಂಡು ಅನುಪಾತ 35:65ಕ್ಕೆ ಪರಿವರ್ತಿಸಿಕೊಂಡಿದ್ದಾರೆ. ಒಟ್ಟಾರೆ ಬೃಹತ್ ಹಗರಣ ಇದಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದರು.







