ವಿದೇಶಿ ಉದ್ಯೋಗಿಗಳಿಗೆ ಉಚಿತ ವಿಮಾನ ಟಿಕೆಟ್ : ಯುಎಇ ಎಮಿರೇಟ್ ಉಮ್ಮ್ ಅಲ್ ಕುವೈನ್ ಘೋಷಣೆ
ದುಬೈ, ಆ. 14: ಈದ್ ರಜೆಯಲ್ಲಿ ತಮ್ಮ ಮನೆಗಳಿಗೆ ಹೋಗಿ ಬರಲು ವಿದೇಶಿ ಕೆಲಸಗಾರರಿಗೆ ಉಚಿತ ವಿಮಾನ ಟಿಕೆಟ್ಗಳನ್ನು ನೀಡಲಾಗುವುದು ಎಂದು ಯುಎಇಯ ಎಮಿರೇಟ್ಗಳಲ್ಲಿ ಒಂದಾಗಿರುವ ಉಮ್ಮ್ ಅಲ್ ಕುವೈನ್ನ ನಾಗರಿಕ ರಕ್ಷಣಾ ಇಲಾಖೆ ಘೋಷಿಸಿದೆ.
ಅವರ ಹೆಂಡತಿಯರು ಮತ್ತು ಮಕ್ಕಳಿಗೆ ಉಡುಗೊರೆಗಳು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗಲು ವಾಹನ ವ್ಯವಸ್ಥೆಯನ್ನೂ ಮಾಡಲಾಗುವುದು.
ಜನರು ತಮ್ಮ ಪ್ರೀತಿ ಪಾತ್ರರೊಡನೆ ಹಬ್ಬ ಆಚರಿಸಲು ಸಾಧ್ಯವಾಗುವಂತೆ, ನಾಗರಿಕ ರಕ್ಷಣೆ ಇಲಾಖೆ ಆರಂಭಿಸಿದ ‘ಈದ್ ಹಬ್ಬವನ್ನು ನಿಮ್ಮ ಮಕ್ಕಳೊಂದಿಗೆ ಆಚರಿಸಿ’ ಕಾರ್ಯಕ್ರಮದ ಭಾಗವಾಗಿ ಈ ಘೋಷಣೆಯನ್ನು ಮಾಡಲಾಗಿದೆ.
ಕುಟುಂಬ ಬಂಧವನ್ನು ಬಲಪಡಿಸುವುದು ಹಾಗೂ ದೀರ್ಘಾವಧಿಯಲ್ಲಿ ಉದ್ಯೋಗಿಗಳ ತೃಪ್ತಿ ಮತ್ತು ಉತ್ಪಾದಕತೆಯನ್ನು ವೃದ್ಧಿಸುವುದು ಇಂಥ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ಉಮ್ ಅಲ್ ಕುವೈನ್ನ ನಾಗರಿಕ ರಕ್ಷಣಾ ಇಲಾಖೆಯ ನಿರ್ದೇಶಕ ಲೆಫ್ಟಿನೆಂಟ್ ಡಾ. ಸಲೀಮ್ ಹಾಮದ್ ಬಿನ್ ಹಮ್ದ ಹೇಳಿದರು.
ಶಾರ್ಜಾ ಉದ್ಯೋಗಿಗಳಿಗೆ ಮುಂಚಿತ ವೇತನ
ಶಾರ್ಜಾದಲ್ಲಿರುವ ಎಲ್ಲ ಸರಕಾರಿ ಉದ್ಯೋಗಿಗಳು ತಮ್ಮ ಆಗಸ್ಟ್ ತಿಂಗಳ ವೇತನವನ್ನು ಈದ್ ರಜೆ ಆರಂಭಗೊಳ್ಳುವ ಮೊದಲು ಪಡೆಯಲಿದ್ದಾರೆ ಎಂದು ಯುಎಇ ಸುಪ್ರೀಂ ಕೌನ್ಸಿಲ್ ಸದಸ್ಯ ಹಾಗೂ ಶಾರ್ಜಾ ಆಡಳಿತಗಾರ ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಕಾಸಿಮಿ ಪ್ರಕಟಿಸಿದ್ದಾರೆ.
ಸರಕಾರಿ ಉದ್ಯೋಗಿಗಳಿಗೆ ರವಿವಾರ ಈದ್ ರಜೆ ಆರಂಭಗೊಳ್ಳುತ್ತದೆ.