ಪ್ರತ್ಯೇಕ ರಾಜ್ಯದ ಕೂಗು ಕೇವಲ ಕುತ್ಸಿತ ರಾಜಕಾರಣ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ
ಬೆಂಗಳೂರು, ಆ.14: ಉತ್ತರ ಕರ್ನಾಟಕಕ್ಕಾಗಿ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗೆಬ್ಬಿಸಿರುವ ಕೆಲವು ರಾಜಕೀಯ ವ್ಯಕ್ತಿಗಳಿಂದಾಗಿ ಇಡೀ ರಾಜ್ಯದ ಅಭಿವೃದ್ಧಿಗೆ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಮಗ್ರತೆಗೆ ಭಾರೀ ಅಪಾಯ ಎದುರಾಗುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ಪ್ರತ್ಯೇಕ ರಾಜ್ಯ ಬೇಕೆಂಬ ಕೂಗಿನ ಹಿಂದೆ ಕುತ್ಸಿತ ರಾಜಕಾರಣ ಅಡಗಿದ್ದು, ರಾಜ್ಯದ ಹಾಗೂ ಜನತೆಯ ಒಟ್ಟು ಹಿತಾಸಕ್ತಿಗೆ ಧಕ್ಕೆಯಾದರೂ ಸರಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕೆಂಬ ಹುನ್ನಾರ ಇದರಲ್ಲಿ ಅಡಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ನಾಡಿನ ನೆಲ, ಜಲ, ನುಡಿ, ಜನ, ಮನದ ಜೊತೆಗೆ ನೈಜ ಹಾಗೂ ಭಾವನಾತ್ಮಕ ನಂಟಿರುವವರು ಎಂದೂ ಪ್ರತ್ಯೇಕ ರಾಜ್ಯದ ಕೂಗನ್ನೆಬ್ಬಿಸಲು ಸಾಧ್ಯವಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಈ ಹಿಂದಿನ ಸರಕಾರಗಳು ಸಾಕಷ್ಟು ಪ್ರಯತ್ನಗಳನ್ನು ಮಾಡದಿರುವುದು ಕೂಡಾ ಗಮನಿಸಬೇಕಾದ ವಿಚಾರ ಎಂದು ಅವರು ಹೇಳಿದ್ದಾರೆ.
ಆ ಭಾಗದ ನಗರ ಹಾಗೂ ಗ್ರಾಮೀಣ ಪ್ರದೇಶಗಳು ಸಾಕಷ್ಟು ಅಭಿವೃದ್ಧಿಯಿಂದ ವಂಚಿತವಾಗಿವೆ. ನೀರಾವರಿ, ರಸ್ತೆ, ಸಾರಿಗೆ, ಶಿಕ್ಷಣ, ಕೈಗಾರಿಕೆ ಸೇರಿದಂತೆ ಉತ್ತರ ಕರ್ನಾಟಕದ ಜನತೆಗೆ ರಾಜ್ಯ ಸರಕಾರ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಅದಕ್ಕೆ ಪೂರಕವಾಗಿ ಸಾಕಷ್ಟು ಆರ್ಥಿಕ ಪೂರೈಕೆಯನ್ನು ಮಾಡಿದರೆ ಮಾತ್ರ ಅಲ್ಲಿಗೆ ನ್ಯಾಯ ಒದಗಿಸಿಕೊಡಬಹುದು ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ನಿರುದ್ಯೋಗ, ರೈತರ ಸಮಸ್ಯೆಗಳು ಹಾಗೂ ಗ್ರಾಮೀಣ ಜನತೆಯ ಮೂಲಭೂತ ಅವಶ್ಯಕತೆಗಳ ಕೊರತೆ ಸಮಸ್ಯೆಗಳನ್ನು ನೀಗಿಸುವಂತಹ ದೃಢ ಇಚ್ಛಾಶಕ್ತಿಯನ್ನು ಸರಕಾರಗಳು ಮಾಡುವ ಅವಶ್ಯಕತೆಯಿದೆ. ಕರ್ನಾಟಕ ರಾಜ್ಯವು ಯಾವತ್ತೂ ಒಂದಾಗಿಯೇ ಇರುವುದು ಹಾಗೂ ರಾಜ್ಯವನ್ನು ವಿಭಜಿಸುವ ಧ್ವನಿಯನ್ನು ಎಸ್‌ಡಿಪಿಐ ಖಂಡಿಸುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







