ತುಂಬಿ ಹರಿಯುತ್ತಿರುವ ಸ್ವರ್ಣ ನದಿ: ಹಿರಿಯಡ್ಕದ ಎರಡು ರಸ್ತೆಗಳ ಸಂಚಾರ ಬಂದ್

ಹಿರಿಯಡ್ಕ, ಆ.14: ಭಾರೀ ಮಳೆಯಿಂದ ಸ್ವರ್ಣ ನದಿಯು ತುಂಬಿ ಹರಿಯುತ್ತಿರುವುದರಿಂದ ಹಿರಿಯಡ್ಕದಿಂದ ಪೆರ್ಡೂರಿಗೆ ತೆರಳುವ ಹಾಗೂ ಹಿರಿಯಡ್ಕ ಕೋಟ್ನಕಟ್ಟೆಯಿಂದ ಶಿರೂರು ಮಠಕ್ಕೆ ತೆರಳುವ ಮಾರ್ಗದ ಸಂಚಾರವನ್ನು ಪುತ್ತಿಗೆ ಹಾಗೂ ಮಾಣೈ ಸೇತುವೆ ಬಳಿ ಬಂದ್ ಮಾಡಲಾಗಿದೆ.
ಪುತ್ತಿಗೆ ಸೇತುವೆ ಬಳಿ ಸ್ವರ್ಣ ನದಿ ನೀರು ಅಕ್ಕಪಕ್ಕದ ಗದ್ದೆಗಳಿಗೆ ನುಗ್ಗಿ ನೀರು ರಸ್ತೆಯ ಮೇಲೆ ನಾಲ್ಕೈದು ಅಡಿ ಹರಿಯುತ್ತಿರುವುದರಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರಿಂದ ಹಿರಿಯಡ್ಕದಿಂದ ಪೆರ್ಡೂರು, ಹೆಬ್ರಿಗಳಿಗೆ ತೆರಳುವ ಎಲ್ಲಾ ವಾಹನಗಳ ಸಂಚಾರವನ್ನು ರಸ್ತೆಗೆ ಕಲ್ಲುಗಳನ್ನಿಟ್ಟು ತಡೆ ಹಿಡಿಯಲಾಗಿದೆ.
ಅದೇ ರೀತಿ ಹಿರಿಯಡ್ಕ ಕೋಟ್ನಕಟ್ಟೆಯಿಂದ ಶಿರೂರು, ಬೈರಂಪಳ್ಳಿ ಮೂಲಕ ಪೆರ್ಡೂರಿಗೆ ತೆರಳುವ ರಸ್ತೆಯನ್ನು ಮಾಣೈ ಸೇತುವೆ ಬಳಿ ನಿರ್ಬಂಧಿಸಲಾಗಿದೆ. ಇಲ್ಲೂ ಸೇತುವೆಯಿಂದ ಸ್ವಲ್ಪ ಹಿಂದೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಆದರೆ ಸ್ವರ್ಣ ನದಿ ಎರಡೂ ಸೇತುವೆಯಿಂದ ಕೆಳಕ್ಕೆ ಹರಿಯುತ್ತಿದೆ. ಎರಡೂ ಕಡೆಗಳಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಲ್ಲಿಸಲಾಗುವುದು ಎಂದು ಹಿರಿಯಡ್ಕ ಪೊಲೀಸರು ತಿಳಿಸಿದ್ದಾರೆ.





