ಚಿನ್ನಾಭರಣ ಕಳವು ಪ್ರಕರಣ: ನೇಪಾಳಿ ಗುಂಪು ಬಂಧನ

ಬೆಂಗಳೂರು, ಆ.14: ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪದಡಿ ನೇಪಾಳ ದೇಶದ ಆರು ಜನರ ಗುಂಪೊಂದನ್ನು ಸಂಪಿಗೆಹಳ್ಳಿ ಉಪವಿಭಾಗದ ಕೊತ್ತನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ದಿಲ್ ಬಹದ್ದೂರ್ (41), ಲಾಲ್ ಬಹದ್ದೂರ್ ಕಟ್ಟಾಯತ (26), ಗಂಗಾ ಬಹದ್ದೂರ್ (42), ಜವೇರಿಯಾ (45), ಮನೋಜ್‌ಕುಮಾರ್ (48) ಮತ್ತು ಭರತ ಬಹದ್ದೂರ್ (36) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರೆಲ್ಲಾ ನೇಪಾಳ ದೇಶದವರಾಗಿದ್ದು, ಬೆಂಗಳೂರಿನ ವಿವಿಧ ಕಡೆ ವಾಸ ಮಾಡಿಕೊಂಡಿದ್ದರು. ಸೋಮವಾರ ಸಂಜೆ 7:30ರ ಸುಮಾರಿಗೆ ಚಿಕ್ಕಗುಬ್ಬಿ ಬಳಿಯ ನೀಲಗಿರಿ ತೋಪಿನ ನಿರ್ಜನ ಪ್ರದೇಶದ ಬಳಿ ಐದಾರು ಮಂದಿ ಮಾರಕಾಸ್ತ್ರಗಳನ್ನಿಟ್ಟುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು, ಮಚ್ಚು, ದೊಣ್ಣೆಗಳನ್ನು ಇಟ್ಟುಕೊಂಡು ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಬೆದರಿಸಿ ಹಣ-ಆಭರಣ ದರೋಡೆಗೆ ಸಂಚು ರೂಪಿಸುತ್ತಿದ್ದಾರೆಂಬ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಇವರಿಂದ 2 ಲ್ಯಾಪ್‌ಟಾಪ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





