ಕರ್ನಾಟಕ ಪ್ರೀಮಿಯರ್ ಲೀಗ್ ಟ್ರೋಫಿ ಅನಾವರಣ
ಬೆಂಗಳೂರು, ಆ.14: ಕರ್ನಾಟಕ ಕ್ರಿಕೆಟ್ ಸಂಸ್ಥೆ ಮೈಸೂರಿನಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಪ್ರೀಮಿಯರ್ ಲೀಗ್‌ನ ಟ್ರೋಫಿಯನ್ನು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮತ್ತು ನ್ಯೂಜಿಲೆಂಡ್ ಮಾಜಿ ಆಲ್‌ರೌಂಡರ್ ಸ್ಕಾಟ್ ಸ್ಟೈರಿಸ್ ಇಂದಿಲ್ಲಿ ಅನಾವರಣ ಮಾಡಿದರು.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಾಲ್ಕು ಕೆಜಿ ತೂಕದ 19.5 ಇಂಚುಗಳಷ್ಟು ಎತ್ತರವಾಗಿರುವ ಅತ್ಯಾಕರ್ಷಕ ಟ್ರೋಫಿಯನ್ನು ಅನಾವರಣ ಮಾಡಿದರು. ಈ ಬಾರಿಯ ಟ್ರೋಫಿಗೆ ಮೈಸೂರು ಅರಮನೆಯ ವಾಸ್ತುಶಿಲ್ಪವನ್ನು ಕೆತ್ತಿದ್ದು, ಆಕರ್ಷಿತವಾಗಿದೆ. ಟ್ರೋಫಿಯಲ್ಲಿ ಸ್ತಂಭಗಳನ್ನು ಅಳವಡಿಸಲಾಗಿದ್ದು, ಸಮೃದ್ಧ ಸ್ವರ್ಣಲೇಪಿತ ಹೂವಿನ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಜತೆಗೆ ಸ್ತಂಭದ ಮೇಲೆ ಸ್ವರ್ಣ ಲೇಪಿತ ಕ್ರಿಕೆಟ್ ಚೆಂಡನ್ನು ಇರಿಸಲಾಗಿದೆ. ಕೇಂದ್ರ ಭಾಗದ ಮಧ್ಯದಲ್ಲಿ ಎರಡು ದೊಡ್ಡ ರೆಕ್ಕೆಗಳನ್ನು ಎರಡೂ ಭಾಗದಲ್ಲಿ ಜೋಡಿಸಿದ್ದು, ಆನೆಯ ದಂತಗಳನ್ನು ಹೋಲುತ್ತಿವೆ. ಅಲ್ಲದೆ, ಟ್ರೋಫಿಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಚಿತ್ರವನ್ನು ಹರಳುಗಳ ನಡುವೆ ಅಳವಡಿಸಲಾಗಿದೆ.
ಈ ವೇಳೆ ಮಾತನಾಡಿದ ಪ್ರಮೋದಾದೇವಿ, ಈ ವರ್ಷ ಮೈಸೂರಿನಲ್ಲಿ ಪ್ರೀಮಿಯರ್ ಲೀಗ್ ಹಮ್ಮಿಕೊಂಡಿರುವುದು ಸಂತೋಷದ ಸಂಗತಿ. ಕ್ರಿಕೆಟ್‌ನಲ್ಲಿ ಕರ್ನಾಟಕ ತನ್ನ ದೃಢವಾದ ಸಂಪ್ರದಾಯಕ್ಕೆ ಹೆಸರಾಗಿದೆ. ಅಲ್ಲದೆ, ವಿಶ್ವದ ಅತ್ಯುತ್ತಮ ಕ್ರಿಕೆಟ್‌ಗರಿಗೆ ಕರ್ನಾಟಕ ತವರು ಮನೆಯಾಗಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕುರಿತು ಅಪಾರವಾದ ಪ್ರೀತಿ ಹೊಂದಿದ್ದರು ಎಂದ ಅವರು, ಕೆಪಿಎಲ್ ರಾಜ್ಯದಲ್ಲಿರುವ ಯುವ ಪ್ರತಿಭೆಗಳನ್ನು ಆಕರ್ಷಿಸುವ ವೇದಿಕೆಯಾಗಿ ರೂಪಗೊಳ್ಳಲಿ ಎಂದು ಆಶಿಸಿದರು.
ಸ್ಕಾಟ್ ಸ್ಟೈರಿಸ್ ಮಾತನಾಡಿ, ಮೊದಲ ಬಾರಿಗೆ ನಾನು ಸಣ್ಣ ನಗರದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದೇನೆ. ಹಿಂದಿನ ತಂಡದಲ್ಲಿದ್ದ ಸಂದರ್ಭದಲ್ಲಿ ದೊಡ್ಡ ನಗರಗಳಲ್ಲಿ ಆಡುತ್ತಿದ್ದೆವು. ಇದು ನನ್ನ ಮೊದಲ ಕೆಪಿಎಲ್ ಆಗಿದೆ. ಇಂತಹ ಟೂರ್ನಿಮೆಂಟ್‌ಗಾಗಿ ದೇಶದ ವಿವಿಧ ಭಾಗಗಳಲ್ಲಿ ಸಂಚಾರ ಮಾಡಿದ್ದೇನೆ. ಭಾರತದಲ್ಲಿ ಅಪಾರವಾದ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಆಡುವ ಪ್ರತಿಭಾವಂತರಿದ್ದಾರೆ. ಕೆಪಿಎಲ್ ಪ್ರತಿಭಾವಂತರಿಗೆ ಅವಕಾಶ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.







