ಆ.15 ರಂದು ಉಸ್ತುವಾರಿ ಸಚಿವರಿಂದ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ: ದಾವಣಗೆರೆ ಜಿಲ್ಲಾಧಿಕಾರಿ
ದಾವಣಗೆರೆ,ಆ.14: ರಾಜ್ಯದ ಮುಖ್ಯಮಂತ್ರಿ ತಮ್ಮ ಆಯವ್ಯಯ ಭಾಷಣದಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮ ಘೋಷಿಸಿರುವಂತೆ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಆ. 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು.
ಆ. 15ರಿಂದ 18ರ ವರೆಗೆ ಹಸಿರು ಕಾರ್ಯಕ್ರಮ ಅನುಷ್ಟಾನಗೊಳಿಸಬೇಕಾದ ಪ್ರಯುಕ್ತ ಮಾಹಿತಿ ನೀಡಲು ಮಂಗಳವಾರ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮ ಅನುಷ್ಟಾನದ ಕುರಿತು ಸಭೆ ನಡೆಸಿ ಕಾರ್ಯಕ್ರಮ ರೂಪಿಸಲಾಗಿದ್ದು, ಹಸಿರು ಕರ್ನಾಟಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆ. 15ರಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಸಿ ನೆಡುವ ಮತ್ತು ಸಸಿ ವಿತರಣೆ ಮಾಡುವ ಮೂಲಕ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.
ಈ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ವ್ಯಾಪಕವಾಗಿ ಆ. 15ರಿಂದ 18ರ ವರೆಗೆ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಇಲಾಖೆಗಳಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿ ಸಸಿಗಳನ್ನು ಕಚೇರಿ ಆವರಣ ಅಥವಾ ಸಮೀಪದ ಸರ್ಕಾರಿ ಜಮೀನಿನಲ್ಲಿ ನೆಡಲಾಗುವುದು. ಎಲ್ಲಾ ಇಲಾಖೆಗಳ ಹಾಗೂ ಶಾಲಾ ಕಾಲೇಜುಗಳ ಸಹಭಾಗಿತ್ವದಿಂದ ದೊಡ್ಡ ಪ್ರಮಾಣದಲ್ಲಿ ಬೀಜದ ಉಂಡೆ ಕಾರ್ಯಕ್ರಮವನನು ಆಯೋಜಿಸಿ, 'ಸಿ' & 'ಡಿ' ಲ್ಯಾಂಡ್, ರೈತರ ಜಮೀನು ಮತ್ತು ಸರ್ಕಾರಿ ಜಮೀನಿನಲ್ಲಿ ಬೀಜದ ಉಂಡೆ/ಬೀಜ ಬಿತ್ತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದ ಅವರು, ಈ ಕಾರ್ಯಕ್ರಮದಡಿ ಆಯ್ದ ಗ್ರಾಮಗಳಲ್ಲಿನ ತಾಲೂಕು ಹಾಗೂ ಜಿಲ್ಲೆಯ ಕೇಂದ್ರಗಳಲ್ಲಿ ಪ್ರತಿ ಕುಟುಂಬಕ್ಕೆ ಅವರ ಅವಶ್ಯಕತೆಗೆ ತಕ್ಕಂತೆ ಸಸಿಗಳನ್ನು ಮನೆಯ ಅಂಗಳದಲ್ಲಿ ಹಂತ-ಹಂತವಾಗಿ ನೆಡಲು ಕ್ರಮ ಕೈಗೊಳ್ಳಲಾಗುವುದು. ಸಸಿಗಳನ್ನು ನೆಟ್ಟ ಸ್ಥಳಗಳ ಜಿಯೋ ಟ್ಯಾಗಿಂಗ್ ಮಾಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅನುಷ್ಟಾನದ ಜೊತೆಗೆ ಮಾಧ್ಯಮಗಳಲ್ಲಿ ಪ್ರಚಾರ, ಬೀದಿ ನಾಟಕ, ಭಿತ್ತಿಚಿತ್ರ, ಕರಪತ್ರ ಮುದ್ರಿಸುವ ಮುಖಾಂತರ ಪರಿಸರದ ಬಗ್ಗೆ ಕಾರ್ಯಕ್ರಮ ಆಯೋಜಿಸುವ ಮೂಲಕ ಅನುಷ್ಟಾನ ಹಾಗೂ ಉಪಯುಕ್ತತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಸಭೆಯಲ್ಲಿ ಜಿಪಂ ಯೋಜನಾಧಿಕಾರಿ ಬಸನಗೌಡ, ಅರಣ್ಯ ಇಲಾಖೆಯ ಮಂಜುನಾಥ್, ಡಿವೈಎಸ್‍ಪಿ ಗೋಪಾಲಕೃಷ್ಣಗೌಡರ್, ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಚಂದ್ರಶೇಖರ್ ಸುಂಕದ್, ಡಿಡಿಪಿಐ ಪರಮೇಶ್ವರಪ್ಪ, ಪಶುಸಂಗೋಪನಾ ಇಲಾಖೆಯ ಶಿವಪ್ರಸಾದ್ ಇದ್ದರು.