ಮೈಸೂರಿನಲ್ಲಿ ನಿಲ್ಲದ ಮಳೆ: ಜನ ಜೀವನ ಅಸ್ತವ್ಯಸ್ತ

ಮೈಸೂರು,ಆ.14: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರಿನ ಜನ ಜೀವನ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿರುವ ವರುಣನ ಆಟಕ್ಕೆ ಜನ ಬೇಸತ್ತಿದ್ದು, ರಸ್ತೆ ಬದಿ ವ್ಯಾಪಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯುಂಟಾಗಿದೆ.
ರವಿವಾರ ಮಧ್ಯಾಹ್ನ ಪ್ರಾರಂಭವಾದ ಮಳೆಯ ಸಿಂಚನ ಮುಂದುವರೆದಿದೆ. ಸ್ವಲ್ಪ ಸಮಯ ಬಿಡುವುಕೊಟ್ಟರೆ ಮತ್ತೆ ಸುರಿಯಲಾರಂಭಿಸುತ್ತದೆ. ಆಷಾಢ ಮಾಸ ಮುಗಿದು ಮದುವೆ, ಗೃಹಪ್ರವೇಶ ಸೇರಿದಂತೆ ಇನ್ನಿತರ ಶುಭಕಾರ್ಯಗಳಿಗೆ ವರುಣನ ಆಗಮನದಿಂದ ಹಿನ್ನಡೆಯಾಗಿದೆ. ನಗರದ ಕೆ.ಆರ್.ವೃತ್ತದಲ್ಲಿ ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರು ಪರದಾಡುವಂತಾಯಿತು.
ಮಳೆಯ ಆರ್ಭಟ: ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ತಾರಕ ಜಲಾಶಯದ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಹಾಗಾಗಿ ತಗ್ಗು ಪ್ರದೇಶದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ತಾರಕ ಜಲಾಶಯ ಕಳೆದ 20 ವರ್ಷಗಳಿಂದ ಸಂಪೂರ್ಣ ತುಂಬಿರಲಿಲ್ಲ. ಇದೀಗ ಬಿದ್ದ ಭಾರೀ ಮಳೆಯಿಂದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಇದರಿಂದ ಹೆಚ್ಚುವರಿ ನೀರನ್ನು ಮೂರು ಗೇಟ್‍ಗಳ ಮೂಲಕ ಹೊರ ಬಿಡಲಾಗುತ್ತಿದೆ. ಹಾಗಾಗಿ ತಾರಕ ನದಿಯ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ತಮ್ಮ ಜಾನುವಾರುಗಳ ಜೊತೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಾರಕ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.







