ವಿವಾದಾತ್ಮಕ ವಿಷಯಗಳು ನಮ್ಮ ಗುರಿ ತಪ್ಪಿಸಬಾರದು: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದ ಭಾಷಣದಲ್ಲಿ ರಾಷ್ಟ್ರಪತಿ

ಹೊಸದಿಲ್ಲಿ, ಆ. 14: ಭಾರತ ಪ್ರಮುಖ ಸನ್ನಿವೇಶದಲ್ಲಿ ಇದೆ. ದೇಶದ ಗುರಿಯ ದಿಕ್ಕು ತಪ್ಪಿಸುವ ವಿವಾದಾತ್ಮಕ ವಿಷಯಗಳು ಹಾಗೂ ಬಾಹ್ಯ ಚರ್ಚೆಗಳಿಗೆ ಅವಕಾಶ ನೀಡಬಾರದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ದೀರ್ಘ ಕಾಲದ ನಿರೀಕ್ಷೆಯ ನಮ್ಮ ಹಲವು ಗುರಿಗಳು ಸಾಧನೆಯ ತುತ್ತ ತುದಿಯಲ್ಲಿರುವುದರಿಂದ ಇತರ ಕಾಲಕ್ಕಿಂತ ಭಿನ್ನವಾದ ಸಂಧಿ ಕಾಲದಲ್ಲಿ ದೇಶ ಇದೆ ಎಂದು ಸ್ವಾತಂತ್ರ ದಿನಾಚರಣೆಯ ಮುನ್ನಾ ದಿನವಾದ ಮಂಗಳವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದ್ದಾರೆ.
ಎಲ್ಲರಿಗೂ ವಿದ್ಯುತ್, ಬಯಲು ಶೌಚಾಲಯ ಮುಕ್ತತೆ, ನಿರ್ವಸತಿ, ತೀವ್ರ ಬಡತನ ನಿರ್ಮೂಲನೆಯನ್ನು ನಾವು ಸಾಧಿಸಬೇಕಾಗಿದೆ ಎಂದು ಅವರು ಹೇಳಿದರು. ಮಹಾತ್ಮಾ ಗಾಂಧಿ ಅವರನ್ನು ಉಲ್ಲೇಖಿಸಿದ ಕೋವಿಂದ್, ಹಿಂಸೆಯ ಶಕ್ತಿಗಿಂತ ಅಹಿಂಸೆಯ ಶಕ್ತಿ ಮೇಲು ಎಂಬುದನ್ನು ಗಾಂಧೀಜಿ ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ನೀವು ಕೈಯ ಮೂಲಕ ಹೊಡೆಯುವ ಶಕ್ತಿಗಿಂತ ಹೆಚ್ಚಿನ ಶಕ್ತಿ ನಿಮ್ಮ ಕೈಯಲ್ಲಿ ಅಡಗಿದೆ. ಸಮಾಜದಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ರಾಮನಾಥ್ ಕೋವಿಂದ್ ಹೇಳಿದರು.





