ಪಾರ್ಕಿಂಗ್ ಜಾಗದಲ್ಲಿ ಬೇರೆ ವಾಹನ ನಿಲುಗಡೆ: ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ವಾಚ್‌ಮೆನ್‌ಗೆ ಹಲ್ಲೆ
ಮಂಗಳೂರು, ಆ.14: ನಗರದ ಕಟ್ಟಡವೊಂದರ ಪಾರ್ಕಿಂಗ್ ಜಾಗದಲ್ಲಿ ಬೇರೆ ವಾಹನ ಪಾರ್ಕಿಂಗ್ ಮಾಡಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಾಚ್‌ಮೆನ್‌ಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಕಾರ್‌ಸ್ಟ್ರೀಟ್ ಶ್ರೀನಿಧಿ ಜ್ಯೂಸ್ ಸೆಂಟರ್ ಮಾಲಕ ವಿದ್ಯಾಧರ್ ಶೇಟ್(45) ಹಲ್ಲೆಗೈದ ಆರೋಪಿ. ವಾಚ್‌ಮೆನ್ ಹನುಮಂತಪ್ಪ (36) ಹಲ್ಲೆಗೊಳಗಾದವರು.
ಆ.13ರಂದು ಸಂಜೆ 5:30ರ ವೇಳೆಗೆ ಹನುಮಂತಪ್ಪ ಕಾರ್‌ಸ್ಟ್ರೀಟ್‌ನಲ್ಲಿರುವ ಬಿಲ್ಡಿಂಗ್‌ನಲ್ಲಿ ವಾಚ್‌ಮ್ಯಾನ್ ಕರ್ತವ್ಯದಲ್ಲಿದ್ದಾಗ, ಜ್ಯೂಸ್ ಸೆಂಟರ್ ಮಾಲಕ ವಿದ್ಯಾಧರ್ ಬೈಕ್‌ನಲ್ಲಿ ಬಂದು ವಾಹನ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದ. ಇದಕ್ಕೆ ಹನುಮಂತಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ವಾಚ್‌ಮೆನ್ ಹನುಮಂತಪ್ಪ ಬಳಿ ಬಂದ ವಿದ್ಯಾಧರ್ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಹನುಮಂತಪ್ಪನಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ವಾಹನವನ್ನು ಅಲ್ಲೇ ಪಾರ್ಕ್ ಮಾಡಿ ಹೋಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹನುಮಂತಪ್ಪ ಬಂದರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.





