ಮಡಿಕೇರಿ: ಬೇತ್ರಿ ಹೆಮ್ಮಾಡು ಗ್ರಾಮದಲ್ಲಿ ಪ್ರವಾಹ ಭೀತಿ; 60 ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

ಮಡಿಕೇರಿ, ಆ.14: ಮಡಿಕೇರಿ ತಾಲೂಕಿನ ಅಂಚಿನ ಕಾವೇರಿ ನದಿ ಪಾತ್ರದ ಬೇತ್ರಿ ಹೆಮ್ಮಾಡು ಗ್ರಾಮ ಪ್ರವಾಹದ ಭೀತಿಗೆ ಸಿಲುಕಿದ್ದು, ಅಲ್ಲಿನ 60 ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕಾರ್ಯ ಬಿರುಸಿನಿಂದ ಸಾಗಿದೆ.
ಮಡಿಕೇರಿ-ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಬರುವ ಬೇತ್ರಿ ಗ್ರಾಮದ ಪಕ್ಕದ ಹೆಮ್ಮಾಡಿನಲ್ಲಿ ಅಂದಾಜು ಐವತ್ತು ಕುಟುಂಬಗಳು ವಾಸವಾಗಿದ್ದು, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಹಾಮಳೆಯಿಂದ ಕಾವೇರಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಗ್ರಾಮ ಪ್ರವಾಹದ ಆತಂಕಕ್ಕೆ ಸಿಲುಕಿ ಕೊಂಡಿದೆ.
ಕ್ಷಣ ಕ್ಷಣಕ್ಕೂ ಕಾವೇರಿಯ ನೀರಿನ ಮಟ್ಟ ಹೆಚ್ಚುತ್ತಿದ್ದು, ಹೆಮ್ಮಾಡು ಗ್ರಾಮದ ಬಹುತೇಕ ಮನೆಗಳು ನೀರಿನಿಂದ ಆವೃತ್ತವಾಗಿ, ಅಲ್ಲಿನ ಸಾಕಷ್ಟು ಕುಟುಂಬಗಳನ್ನು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರ್ಯಾಫ್ಟರ್ ಗಳನ್ನು ಬಳಸಿ ಸುರಕ್ಷಿತ ಸ್ಥಳಕ್ಕೆ ಕರೆ ತರುತ್ತಿದ್ದಾರೆ.
ಸಂಪರ್ಕ ಕಡಿತ ಸಾಧ್ಯತೆ: ತಲಕಾವೇರಿ, ಭಾಗಮಂಡಲ ಸೇರಿದಂತೆ ನದಿ ಪಾತ್ರದ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕಾವೇರಿ ಉಕ್ಕಿ ಹರಿಯುತ್ತಿದ್ದು, ದಶಕಗಳಿಗೆ ಒಮ್ಮೆಯಷ್ಟೆ ತುಂಬುತ್ತದೆನ್ನಲಾಗುವ ಬೇತ್ರಿಯ ಸೇತುವೆಯ ಮೇಲೆ ಕಾವೇರಿಯ ಪ್ರವಾಹ ಹರಿಯಲು ಒಂದೆರಡು ಅಡಿಗಳಷ್ಟೆ ಬಾಕಿ ಉಳಿದಿದೆ. ಮಹಾಮಳೆ ಮುಂದುವರೆದರೆ ಸೇತುವೆ ಮುಳುಗಡೆಯಾಗಿ ಮಡಿಕೇರಿ-ವೀರಾಜಪೇಟೆ ನಡುವಿನ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.







