ಆ. 21ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ: ‘ಮಾತೆ ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪ್ರದಾನ

ಮಡಿಕೇರಿ ಆ.14: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ‘ಮಾತೆ ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪ್ರದಾನ ಸಮಾರಂಭ ಆ.21ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಸಂದರ್ಭ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಪ್ರಾಥಮಿಕ ಶಿಕ್ಷಣದ ಆಮೂಲಾಗ್ರ ಬದಲಾವಣೆಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಚೇತನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸದಾ ಕಾಲ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸರಕಾರ ಮತ್ತು ಇಲಾಖೆಯ ಗಮನ ಸೆಳೆಯುವುದರ ಜೊತೆಗೆ ಹಲವಾರು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿಕೊಂಡಿದೆ. ಇನ್ನೂ ಹಲವು ಬೇಡಿಕೆಗಳ ಈಡೇರಿಕೆಗೆ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಹಕ್ಕೊತ್ತಾಯ ಮಂಡಿಸುವುದರ ಜೊತೆಗೆ ಸರಕಾರ ಶಾಲೆಗಳ ಸಬಲೀಕರಣಕ್ಕಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತಾಯಿಸಲಾಗುವುದು ಎಂದರು.
ಸರಕಾರಿ ಶಾಲೆಗಳು ಉಳಿಯಬೇಕಾದರೆ ಆಂಗ್ಲ ಮಾಧ್ಯಮದಲ್ಲಿ ಎಲ್‍ಕೆಜಿ-ಯುಕೆಜಿಯನ್ನು ಆರಂಭಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಈಗಾಗಲೇ ಸಂಘ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರಥಮ ದರ್ಜೆ ಸಹಾಯಕರು ಪಡೆಯುವ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಕರು, ಮುಖ್ಯೋಪಾಧ್ಯಾಯರುಗಳಿಗೆ ಭಡ್ತಿ ನೀಡುವ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸಮಗ್ರ ಬದಲಾವಣೆ ಮಾಡುವುದು ಮತ್ತು ಭಡ್ತಿಗೆ ನಿಗದಿಗೊಳಿಸಿದ ಪರೀಕ್ಷಾ ಪದ್ಧತಿಯನ್ನು ಕೈಬಿಡಬೇಕು ಹಾಗೂ ಭಡ್ತಿ ಪ್ರಮಾಣವನ್ನು ಹೆಚ್ಚಿಸಿ ಶೀಘ್ರ ಆಡಳಿತಾತ್ಮಕ ಆದೇಶ ಹೊರಡಿಸಿ ಭಡ್ತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಎಚ್.ಎಸ್.ಚೇತನ್ ಒತ್ತಾಯಿಸಿದರು.
ನೂತನ ಪಿಂಚಣಿ ಯೋಜನೆ ಶಿಕ್ಷಕರ ಜೀವನ ಭದ್ರತೆಗೆ ಮಾರಕವಾಗಿದ್ದು, ಈ ಹಿನ್ನೆಲೆಯಲ್ಲಿ ಇದನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಹಾಗೂ ಭಡ್ತಿ ಹೊಂದುವುದರಿಂದ ವಂಚಿತರಾಗುವ 10, 15, 20, 25 ವರ್ಷಗಳ ಕಾಲಮಿತಿ ಶಿಕ್ಷಕರಿಗೆ 6ನೇ ವೇತನ ಆಯೋಗದ ಅಂತಿಮ ವರದಿ ಹಾಗೂ 2ನೇ ವರದಿಯ ಶಿಫಾರಸ್ಸಿನಂತೆ ಸರಕಾರ ತಕ್ಷಣ ವರದಿಯನ್ನು ಒಪ್ಪಿಕೊಂಡು ಕಾಲಮಿತಿ ವೇತನ ನೀಡಿ ವೇತನ ವ್ಯತ್ಯಾಸವನ್ನು ಸರಿಪಡಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಜೇಷ್ಠತೆಯ ಆಧಾರದ ಮೇಲೆ ಉಪನಿರ್ದೇಶಕರ ಹುದ್ದೆವರೆಗೆ ಮುಂಬಡ್ತಿ ನೀಡಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ದೈಹಿಕ ಶಿಕ್ಷಕರಿಗೂ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವುದರೊಂದಿಗೆ ಸಂಘವು ಈ ಹಿಂದೆ ಸರಕಾರಕ್ಕೆ ನೀಡಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಆ.21ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಶೈಕ್ಷಣಿಕ ಸಮ್ಮೇಳನವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಈ ಸಂದರ್ಭ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದ ಅವರು, ಸಮ್ಮೇಳನದಲ್ಲಿ ಜಿಲ್ಲೆಯ ಬಹುತೇಕ ಶಿಕ್ಷಕರು ಭಾಗವಹಿಸಲಿರುವುದಾಗಿ ನುಡಿದರು.
ಹೇಮಾವತಿಗೆ ಪ್ರಶಸ್ತಿ
ರಾಷ್ಟ್ರದ ಪ್ರಥಮ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ರಾಜ್ಯದ ಪ್ರತೀ ಜಿಲ್ಲೆಯ ಸರ್ವಶ್ರೇಷ್ಠ ಶಿಕ್ಷಕ, ಶಿಕ್ಷಕಿ ಪ್ರಶಸ್ತಿಗೆ ಈ ಬಾರಿ ಸೋಮವಾರಪೇಟೆ ತಾಲೂಕಿನ ಕಲ್ಕಂದೂರು ಶಾಲೆಯ ಶಿಕ್ಷಕಿ ಕೆ.ಎಲ್. ಹೇಮಾವತಿ ಅವರು ಆಯ್ಕೆಯಾಗಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಸ್.ಎ. ಯೋಗೇಶ್, ಕಾರ್ಯದರ್ಶಿ ರೇವತಿ ರಮೇಶ್, ಖಜಾಂಚಿ ಸಿ.ಎಲ್.ಜ್ಯೋತಿ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ ಹಾಗೂ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಬಸವರಾಜು ಉಪಸ್ಥಿತರಿದ್ದರು.







