ಕರ್ನಾಟಕದಲ್ಲಿ ಮೊದಲ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದು ಹೈದರ್ ಅಲಿ: ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಆ.14: ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲೇ ಹೈದರ್ ಅಲಿ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಮರಿಸಿದರು.
ಬುಧವಾರ ನಗರದ ಸಿಟಿ ರೈಲು ನಿಲ್ದಾಣದ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ ಹೋರಾಟಗಾರರಾದ ಹೈದರ್ ಅಲಿ, ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ, ಮುಧೋಳದ ನಾಯಕರು ಸೇರಿದಂತೆ ಅನೇಕ ನಾಯಕರು ದೇಶಕ್ಕೆ ಸ್ವಾತಂತ್ರದ ಕಿಚ್ಚು ಹಚ್ಚಿದ್ದರು ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣನ ಅನನ್ಯವಾದ ದೇಶಭಕ್ತಿಯನ್ನು ಪ್ರತಿಯೊಬ್ಬರು ಮೆಚ್ಚಲೇಬೇಕು. ಅವರ ದೇಶಪ್ರೇಮ ಎಲ್ಲರಿಗೂ ಸ್ಫೂರ್ತಿ. ಆದರೆ, ನಮ್ಮವರು ಹಾಗೂ ಬ್ರಿಟಿಷರ ಕುತಂತ್ರಕ್ಕೆ ರಾಯಣ್ಣ ಬಲಿಯಾದರು ಎಂದ ಅವರು, ಕಾಕತಾಳೀಯ ಎಂಬಂತೆ ರಾಯಣ್ಣ ದೇಶಕ್ಕೆ ಸ್ವತಂತ್ರ ಸಿಕ್ಕಿದ ದಿನದಂದೆ ಜನಿಸಿದ್ದು, ಜ.26ರಂದು ಹುತಾತ್ಮರಾದರು. ಈ ಎರಡೂ ದಿನಗಳು ಭಾರತದ ಇತಿಹಾಸದಲ್ಲಿ ವಿಶೇಷವಾದ ದಿನಗಳಾಗಿವೆ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 260 ಕೋಟಿ ಹಣವನ್ನು ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಿದ್ದೆ. ಅಲ್ಲದೆ, ಸಂಗೊಳ್ಳಿ ರಾಯಣ್ಣ ಶೌರ್ಯ ಹಾಗೂ ಸಾಹಸ ಸಾರುವ ಹಾಗೂ ದೇಶಕ್ಕಾಗಿ ಯುವ ನಾಯಕರನ್ನು ತಯಾರು ಮಾಡುವ ನಿಟ್ಟಿನಲ್ಲಿ ಸೈನಿಕ ಶಾಲೆಯನ್ನು ಸ್ಥಾಪಿಸಬೇಕು ಎಂಬ ಅಭಿಲಾಷೆಯಿಂದ ಹಣ ಮೀಸಲಿಡಲಾಗಿದೆ. ನಂದಗಡವನ್ನು ಯಾತ್ರಾ ಸ್ಥಳವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಾಡಿನ ಸ್ವಾಭಿಮಾನದ ಸಂಕೇತವಾಗಿ, ದೊಡ್ಡ ಮಟ್ಟದಲ್ಲಿ ಬ್ರಿಟಿಷರ ವಿರುದ್ಧ ಬಂಡಾಯವೆದ್ದ ಸಂಗೊಳ್ಳಿ ರಾಯಣ್ಣನ ಹೋರಾಟದ ಕಿಚ್ಚು ಎಲ್ಲರಿಗೂ ಆದರ್ಶ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಸ್ವತಂತ್ರಕ್ಕಾಗಿ ಪ್ರಾಣಾರ್ಪಿಸಿದ ರಾಯಣ್ಣನ ತ್ಯಾಗವನ್ನು ಅನುಸರಿಸಿದರೆ, ಅವರಿಗೆ ನಾವು ನೀಡುವ ಅರ್ಥಪೂರ್ಣ ಗೌರವ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಮಾಜಿ ಶಾಸಕ ಎಚ್.ಎಂ.ರೇವಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.