ಹನೂರು: ದಾರುಲ್ ಫುರ್ಖಾನ್ ವತಿಯಿಂದ ಸ್ವಾತಂತ್ರೋತ್ಸವ ಆಚರಣೆ
ಹನೂರು,ಆ.15: ಮದ್ರಸಾ ದಾರುಲ್ ಫುರ್ಖಾನ್ ಅರಬಿ ಶಾಲಾ ಕಮಿಟಿ ಮತ್ತು ಗ್ರಾಮದ ಮುಖಂಡರು ಸೇರಿ ಬಂಡಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಸ್ವಾತಂತ್ರ ದಿನವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡ ಸೈಯದ್ ಮುಹಿದಿನ್ ಷಾಹಿಬ್ ದ್ವಜಾರೋಹಣವನ್ನು ನೆರವೇರಿಸಿದರು. ನಂತರ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೌಲಾನ ಜುನೈದ್ ಅಹಮದ್ ಕಾಸ್ಮಿ ಮಾತನಾಡಿ, ನಮ್ಮ ದೇಶ ಸರ್ವ ಜನಾಂಗದವರೂ ಕೂಡಿ ಬಾಳುವ ದೇಶವಾಗಿದ್ದು, ನಮ್ಮ ದೇಶ ಜಗತ್ತಿನಲ್ಲಿರುವ ಎಲ್ಲಾ ದೇಶಕ್ಕೂ ಮಾದರಿಯಾಗಿದೆ. ನಾವೆಲ್ಲಾ ಭೇದ ಭಾವವನ್ನು ಬದಿಗಿಟ್ಟು ಒಟ್ಟಾಗಿ ಆಚರಿಸುವ ಹಬ್ಬವೇ ಈ ಸ್ವಾತಂತ್ರ ದಿನಾಚರಣೆಯಾಗಿದ್ದು, ನಮಗೆ ಸ್ವಾತಂತ್ರದ ಸಿಹಿ ನೀಡಲು ನಮ್ಮ ಹಿರಿಯರು ಮಾಡಿದ ತ್ಯಾಗ, ಬಲಿದಾನ ಹೋರಾಟಗಳನ್ನು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್ ಮಾತನಾಡಿ, ಮದ್ರಸ ದಾರುಲ್ ಫುರ್ಖಾನ್ ಅರಬಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಅರಬಿ ಭಾಷೆಯ ಜೊತೆ ಕನ್ನಡ, ಇಂಗ್ಲೀಷ್ ಕಲಿಸುವುದರ ಜೊತೆಗೆ ವಿದ್ಯಾರ್ಥಿ ದಿಸೆಯಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೂಡಲು ಹೋರಾಡಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹುತಾತ್ಮರಾದ ಮಹಿನೀಯರ ಸಾಧನೆಗಳ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದರು.
ಈ ಸಮಾರಂಭದಲ್ಲಿ ಮೌಲಾನ ರಿಝ್ವಾನ್ ಷಾಬ್ ನದ್ವಿ, ಮೌಲಾನ ಉಷೇನ್ ಷಾಬ್ ಆಸ್ಮಿ, ಗ್ರಾಪಂ ಸದಸ್ಯ ಲಿಂಗರಾಜು, ಅಬ್ರಾರ್, ಶಿವಮ್ಮ, ಶಿವಮಲ್ಲು, ಶಾಹುಲ್ ಅಹಮದ್ (ತಾರೀಕ್) ಮಾಜಿ ಗ್ರಾಪಂ ಸದಸ್ಯ ಸ್ವಾಮಿ, ಹನೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಯಿಲ್ ಕಮಿಟಿ ಸದಸ್ಯರು ಹಾಗೂ ಇನ್ನಿತರರು ಹಾಜರಿದ್ದರು.