ಕಲಬುರಗಿಯಲ್ಲಿ ಮೋಡ ಬಿತ್ತನೆ ಬಗ್ಗೆ ಚರ್ಚೆ: ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ

ಕಲಬುರಗಿ, ಆ. 15: ಜಿಲ್ಲೆಯಲ್ಲಿ ತೀವ್ರ ಮಳೆ ಅಭಾವದ ಹಿನ್ನೆಲೆಯಲ್ಲಿ ಇನ್ನು ಒಂದೆರಡು ದಿನಗಳಲ್ಲಿ ಮೋಡ ಬಿತ್ತನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ಈ ಬಾರಿ ಶೇ.65ರಿಂದ ಶೇ.70ರಷ್ಟು ಮಳೆ ಕೊರತೆ ಉಂಟಾಗಿದೆ. ಅಲ್ಲದೆ, ಹವಾಮಾನ ಇಲಾಖೆ ಮಳೆಯಾಗುತ್ತದೆ ಎನ್ನುವ ಮುನ್ಸೂಚನೆ ನೀಡಿದೆ. ಒಂದು ವೇಳೆ ಇದೇ ಸ್ಥಿತಿ ಮುಂದುವರಿದರೆ ಮೋಡ ಬಿತ್ತನೆಗೆ ಚಿಂತಿಸಲಾಗುವುದು ಎಂದರು.
ಮೋಡ ಬಿತ್ತನೆ ಸಂಬಂಧ ಕೃಷಿ ಸಚಿವ ಶಿವಶಂಕರ ರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸುವ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.
ಒಂದು ಕಡೆ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಆ ಭಾಗದ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಜಲಾಶಯಗಳು ಅವಧಿಗೂ ಮೊದಲೆ ಭರ್ತಿಯಾಗಿವೆ. ಆದರೆ, ಮತ್ತೊಂದು ಕಡೆ 13 ಜಿಲ್ಲೆಗಳಲ್ಲಿ ಕನಿಷ್ಠ ಪ್ರಮಾಣದ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಹೇಳಿದರು.







