ಬಳ್ಳಾರಿ: ಭಾರತದ ಅತ್ಯುನ್ನತ ಕ್ರೀಡಾ ತರಬೇತಿ ಸಂಸ್ಥೆ ಉದ್ಘಾಟನೆ
ಬಳ್ಳಾರಿ, ಆ.15: ಭಾರತದ ಖಾಸಗಿ ಹೂಡಿಕೆಯ ಮೊದಲ ಅತ್ಯುನ್ನತ ಕ್ರೀಡಾ ತರಬೇತಿ ಸಂಸ್ಥೆಯಾದ ಇನ್‌ಸ್ಟೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಐಐಎಸ್) ಅನ್ನು ಕರ್ನಾಟಕದ ವಿಜಯನಗರದಲ್ಲಿ ಉದ್ಘಾಟಿಸಲಾಯಿತು.
ಭಾರತದ ಹಿರಿಯ ಒಲಿಂಪಿಕ್ ಕ್ರೀಡಾಪಟುಗಳು, ಸರಕಾರಿ ಅಧಿಕಾರಿಗಳು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಈ ಸಂಸ್ಥೆಯನ್ನು ಲೋಕಾರ್ಪಣೆ ಮಾಡಲಾಯಿತು. ಜೆಎಸ್‌ಡಬ್ಲೂ ಸಮೂಹ ಸಂಸ್ಥೆಯ ವಿನೂತನವಾದ ಈ ಉಪಕ್ರಮದಲ್ಲಿ 42 ಎಕರೆಗೂ ಅಧಿಕ ವಿಸ್ತೀರ್ಣದ ಪ್ರದೇಶದಲ್ಲಿ ಈ ಕ್ರೀಡಾ ತರಬೇತಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಭಾರತೀಯ ಕ್ರೀಡಾಪಟುಗಳಿಗೆ ಅತ್ಯಾಧುನಿಕ ಮೂಲಸೌಕರ್ಯಗಳು, ಪರಿಣಿತ ತರಬೇತುದಾರರು ಮತ್ತು ಕ್ರೀಡಾ ವಿಜ್ಞಾನಗಳೊಂದಿಗೆ ವಿಶ್ವದರ್ಜೆಯ ಒಲಿಂಪಿಕ್ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ.
ಒಲಿಂಪಿಕ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದಿರುವ ಬಲ್‌ಬೀರ್ ಸಿಂಗ್, ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿರುವ ಏಕೈಕ ಕ್ರೀಡಾಪಟು ಎನಿಸಿರುವ ಅಭಿನವ್ ಬಿಂದ್ರಾ ಮತ್ತು 12 ಬಾರಿ ಗ್ರಾನ್ ಸ್ಲಾಂ ಚಾಂಪಿಯನ್ ಆಗಿರುವ ಮಹೇಶ್ ಭೂಪತಿ ಅವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇವರಲ್ಲದೇ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್(ಐಒಎ)ನ ಅಧ್ಯಕ್ಷ ನರೀಂದರ್ ಬಾತ್ರ, ಭಾರತೀಯ ಕ್ರೀಡಾ ಪ್ರಾಧಿಕಾರದ ವಿಶೇಷ ನಿರ್ದೇಶಕ ಓಂಕಾರ್ ಕೇಡಿಯಾ ಸೇರಿದಂತೆ ಕ್ರೀಡಾ ಕ್ಷೇತ್ರದ ಇನ್ನೂ ಹಲವಾರು ಗಣ್ಯರು ಸಂಸ್ಥೆಯ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.
ಅತಿಥಿಗಳನ್ನು ಜೆಎಸ್‌ಡಬ್ಲ್ಯೂ ಗ್ರೂಪ್‌ನ ಅಧ್ಯಕ್ಷ ಸಜ್ಜನ್ ಜಿಂದಾಲ್, ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಅಧ್ಯಕ್ಷೆ ಸಂಗೀತಾ ಜಿಂದಾಲ್, ಐಐಎಸ್‌ನ ಸಂಸ್ಥಾಪಕರು ಮತ್ತು ಜೆಎಸ್‌ಡಬ್ಲ್ಯೂ ಸಿಮೆಂಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪಾರ್ಥ ಜಿಂದಾಲ್ ಮತ್ತು ಜೆಎಸ್‌ಡಬ್ಲೂ ಸ್ಪೋರ್ಟ್ಸ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿನ ಮುಸ್ತಾಫಾ ಫೌಸ್ ಅವರು ಸ್ವಾಗತಿಸಿದರು.
ಇಲ್ಲಿರುವ ಮೂಲಸೌಕರ್ಯಗಳು: 400 ಮೀಟರ್ ಅಥ್ಲೆಟಿಕ್ಸ್ ಟ್ರಾಕ್‌ಗೆ ಐಎಎಎಫ್ ಮಾನ್ಯತೆ, ಮೂರು ಜೂಡೋ ಮ್ಯಾಟ್‌ಗಳು, ಮೂರು ಕುಸ್ತಿ ಮ್ಯಾಟ್‌ಗಳು ಮತ್ತು ಮೂರು ಬಾಸ್ಕಿಂಗ್‌ರಿಂಗ್‌ಗಳಿವೆ. 42,000 ಚದರಡಿ ವಿಸ್ತೀರ್ಣದ ಹೈ-ಪರ್ಫಾರ್ಮೆನ್ಸ್ ಸೆಂಟರ್. 16,000 ಚದರಡಿಯ ಸ್ಟ್ರೆಂಥ್ ಅಂಡ್ ಕಂಡೀಶನಿಂಗ್ ಏರಿಯಾ. 5,000 ಚದರಡಿಯ ಕೆಫೆಟೇರಿಯಾ. ಎಫ್‌ಐಎನ್‌ಎ ಮಾನ್ಯತೆ ನೀಡಿರುವ ಅಕ್ವಾಟಿಕ್‌ಸೆಂಟರ್. 2019ರ ವೇಳೆಗೆ ಆರಂಭ. 2017 ರ ಎಪ್ರಿಲ್‌ನಲ್ಲಿ ಈ ಸಂಸ್ಥೆ ಕಾರ್ಯಾರಂಭ ಮಾಡಿದ್ದು, ಇಲ್ಲಿ ಹೆಸರಾಂತ ಕ್ರೀಡಾಪಟುಗಳು ತರಬೇತಿಗಾಗಿ ಆಗಮಿಸಿದ್ದಾರೆ.
ಇಲ್ಲಿ ತರಬೇತಿ ಹೊಂದಿದ ಹಲವಾರು ಕ್ರೀಡಾಪಟುಗಳು ಈಗಾಗಲೇ ಹಲವು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನವನ್ನೂ ನೀಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ ವಿಜೇತರಾದ ನೀರಜ್ ಚೋಪ್ರಾ, ವಿಕಾಸ್ ಕೃಷ್ಣನ್ ಯಾದವ್ ಮತ್ತು ವಿನೇಶ್ ಫೊಗತ್, ರಿಯೋ ಕಂಚು ಪದಕ ವಿಜೇತರಾದ ಸಾಕ್ಷಿ ಮಲಿಕ್, ಯುವ ಅಥ್ಲೀಟ್‌ಗಳಾದ ಬಾಸ್ಕರ್ ನಿಖತ್‌ಝರೇನ್, ಹೈಜಂಪ್ ಪಟು ತೇಜಸ್ವಿನ್ ಶಂಕರ್ ಸೇರಿದಂತೆ ಮೊದಲಾದವರು ಇಲ್ಲಿ ತರಬೇತಿ ಪಡೆದಿದ್ದಾರೆ.







