“ಅವರು ನಮ್ಮೊಂದಿಗಿಲ್ಲ, ಅವರಿಗೆ ನಾನು ಶ್ರದ್ಧಾಂಜಲಿ ಅರ್ಪಿಸುವೆ”
ಗೊಂದಲ ಸೃಷ್ಟಿಸಿದ ರಾಜನಾಥ್ ಸಿಂಗ್ ಹೇಳಿಕೆ

ಹೊಸದಿಲ್ಲಿ,ಆ. 15: "ಅವರು ನಮ್ಮ ನಡುವೆ ಇಲ್ಲ. ಅವರಿಗೆ ನಾನು ಶ್ರದ್ಧಾಂಜಲಿ ಅರ್ಪಿಸುವೆ" ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ.
ಮಧ್ಯಾಹ್ನ ಚಾನಲ್ ಒಂದು ಸಚಿವ ರಾಜನಾಥ್ ಸಿಂಗ್ ಹೇಳಿಕೆಯ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದಂತೆ ಇದನ್ನೇ ನಂಬಿದ ಚಾನಲ್ ಗಳು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾದರೆಂದು ವರದಿ ಬಿತ್ತರಿಸಿತು.
ವಾಜಪೇಯಿ ಮಧುಮೇಹ, ಮೂತ್ರದ ಸೋಂಕು ಸೇರಿದಂತೆ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಆರೋಗ್ಯ ಸ್ಥಿತಿ ಕಳೆದ 24 ಗಂಟೆಗಳಲ್ಲಿ ಬಿಗಡಾಯಿಸಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ವಾಜಪೇಯಿ ಆರೋಗ್ಯ ವಿಚಾರಿಸಲು ರಾಜನಾಥ್ ಸಿಂಗ್ ಆಸ್ಪತ್ರೆಗೆ ಆಗಮಿಸಿದ್ದರು. ಆಸ್ಪತ್ರೆಯಿಂದ ಹೊರಬಂದ ಅವರನ್ನು ಪತ್ರಕರ್ತರು ಮಾತನಾಡಿಸಿದ್ದರು. ಈ ಸಂದರ್ಭ ರಾಜನಾಥ್ ಸಿಂಗ್ ಬೇರೆ ಯಾರಿಗೋ ಶ್ರದ್ಧಾಂಜಲಿ ಸಲ್ಲಿಸಿದ್ದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ವರದಿ ಮಾಡಿದ್ದವು.





