ಬರೇಲಿ, ಕಾನ್ಪುರ, ಆಗ್ರಾ ವಿಮಾನ ನಿಲ್ದಾಣಗಳ ಹೆಸರು ಬದಲಿಸಲು ಮುಂದಾದ ಆದಿತ್ಯನಾಥ್ ಸರಕಾರ

ಲಕ್ನೋ, ಆ.16: ಉತ್ತರ ಪ್ರದೇಶದ ಬರೇಲಿ, ಕಾನ್ಪುರ ಮತ್ತು ಆಗ್ರಾ ವಿಮಾನ ನಿಲ್ದಾಣಗಳನ್ನು ಮರುನಾಮಕರಣಗೊಳಿಸಲು ಕೇಂದ್ರದ ಅನುಮತಿಯನ್ನು ಉತ್ತರ ಪ್ರದೇಶ ಸರಕಾರ ಕೋರಿದೆ. ರಾಜ್ಯದ ಐತಿಹಾಸಿಕ ಮುಘಲ್ ಸರೈ ರೈಲ್ವೆ ನಿಲ್ದಾಣಕ್ಕೆ ಆರೆಸ್ಸೆಸ್ ಚಿಂತಕ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಟ್ಟ ಕೆಲವೇ ದಿನಗಳಲ್ಲಿ ಈ ಹೊಸ ಬೇಡಿಕೆ ಬಂದಿದೆ.
ಬರೇಲಿ ವಿಮಾನ ನಿಲ್ದಾಣವನ್ನು ನಾಥ್ ನಗ್ರಿ ಎಂದು ಮರುನಾಮಕರಣಗೊಳಿಸುವ ಪ್ರಸ್ತಾವನೆ ಇದೆ ಎನ್ನಲಾಗಿದೆ. ಇದು ಈ ನಗರದ ಪ್ರಾಚೀನ ಹೆಸರಾಗಿದ್ದು ಅಲ್ಲಿ ಶಿವನ ಆರಾಧಕರು ಅಧಿಕ ಸಂಖ್ಯೆಯಲ್ಲಿರುವುದರಿಂದ ಈ ಹೆಸರು ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ. ಕಾನ್ಪುರದ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಗಣೇಶ್ ಶಂಕರ್ ವಿದ್ಯಾರ್ಥಿ ಅವರ ಹೆಸರನ್ನಿಡಬೇಕೆಂಬ ಪ್ರಸ್ತಾಪವಿದ್ದರೆ ಆಗ್ರಾ ವಿಮಾನ ನಿಲ್ದಾಣಕ್ಕೆ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಡಲು ಯೋಚಿಸಲಾಗಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರು ನಾಥ ಪಂಥಕ್ಕೆ ಸೇರಿದವರಾಗಿರುವುದರಿಂದ ಈಗಾಗಲೇ ಅವರು ಭಾರತೀಯ ವಾಯುಸೇನೆಯ ಗೋರಖಪುರ್ ವಿಮಾನ ನಿಲ್ದಾಣದ ಸಿವಿಲ್ ಟರ್ಮಿನಲ್ ಗೆ ನಾಥ ಪಂಥದ ಸ್ಥಾಪಕ ಮಹಾ ಯೋಗಿ ಗೋರಖನಾಥ್ ಅವರ ಹೆಸರನ್ನಿಟ್ಟಿದ್ದಾರೆ.
ವಿಮಾನ ನಿಲ್ದಾಣಗಳ ಮರುನಾಮಕರಣಕ್ಕೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಜತೆ ಮಾತುಕತೆಗಳು ನಡೆಯುವ ಸಾಧ್ಯತೆಯಿದೆಯೆಂದು ಉತ್ತರ ಪ್ರದೇಶ ನಾಗರಿಕ ವಿಮಾನಯಾನ ಸಚಿವ ನಂದ ಗೋಪಾಲ್ ನಂದಿ ಹೇಳಿದ್ದಾರೆ.







