ದಾವಣಗೆರೆ: ಸಾಗುವಳಿ ಪತ್ರ ನೀಡಲು ಒತ್ತಾಯಿಸಿ ರೈತ ಸಂಘದಿಂದ ಧರಣಿ

ದಾವಣಗೆರೆ,ಆ.16: ಅರಣ್ಯ ಭೂಮಿ ಹಾಗೂ ಗೋಮಾಳ ಸಾಗುವಳಿದಾರರಿಗೆ ತಕ್ಷಣ ಸಾಗುವಳಿ ಪತ್ರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ, ತಾಲೂಕು ಘಟಕದಿಂದ ನಗರದಲ್ಲಿ ಬುಧವಾರ ಸಾಂಕೇತಿಕವಾಗಿ ತಾಲೂಕಿನ ಮಾಯಕೊಂಡ ಗ್ರಾಮದ ನಾಡ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ದಾವಣಗೆರೆ ತಾಲೂಕು ಮಾಯಕೊಂಡ ಗ್ರಾಮದ ನಾಡ ಕಚೇರಿ ಎದುರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ, ತಾಲೂಕು ಮುಖಂಡರು ತಹಶೀಲ್ದಾರ್ ಸಂತೋಷ್‍ಗೆ ಮನವಿ ಅರ್ಪಿಸಿದರು. ಈ ಸಂದರ್ಭ ಮಾತನಾಡಿದ ಸಂಘಟನೆ ಮುಖಂಡರು, ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಸುತ್ತಮುತ್ತ ಸುಮಾರು ವರ್ಷಗಳಿಂದ ಸರ್ವೇ ನಂಬರ್ 68ರಲ್ಲಿ ಸುಮಾರು 650 ಎಕರೆ, ಸರ್ವೇ ನಂಬರ್ 62ರ ರಾಂಪುರ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದು, ಇದು ಇಂದಿಗೂ ಅರಣ್ಯ ಭೂಮಿಯೋ, ಗೋಮಾಳವೋ ಎಂಬುದು ದೃಢಪಟ್ಟಿಲ್ಲ ಎಂದರು.
ಕಳೆದ ತಿಂಗಳು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದರು. ಸ್ಥಳದಲ್ಲಿದ್ದ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳಿಗೆ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ ಸಹ ನೀಡಿದ್ದರು. ಆದರೆ, ಈವರೆಗೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅನೇಕ ದಶಕಗಳಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿರುವ ನೂರಾರು ಕುಟುಂಬಗಳಿಗೆ ಅಧಿಕಾರಿಗಳ ಅಸಡ್ಡೆಯಿಂದಾಗಿ ತೀವ್ರ ತೊಂದರೆಯಾಗಿದೆ. ಸಾಗುವಳಿ ಮಾಡುತ್ತಿರುವ ಭೂಮಿಯು ಸರ್ಕಾರಿ ಗೋಮಾಳವೋ ಅಥವಾ ಅರಣ್ಯ ಭೂಮಿಯೇ ಎಂಬುದನ್ನು ದೃಢಪಡಿಸುವ ಕೆಲಸವನ್ನೂ ಅಧಿಕಾರಿಗಳು ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಸ್ವತಃ ಜಿಲ್ಲಾಧಿಕಾರಿಗಳೇ ಅರಣ್ಯ ಭೂಮಿಯೋ, ಗೋಮಾಳವೋ ಎಂಬುದನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದರೂ ಸ್ಪಂದಿಸದ ಉಭಯ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿ ಖಂಡನೀಯ. ತಕ್ಷಣವೇ ಈ ಬಗ್ಗೆ ಸ್ಪಂದಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಅವರು ಎಚ್ಚರಿಸಿದರು.
ಸಾಗುವಳಿ ಪತ್ರಕ್ಕಾಗಿ ಈವರೆಗೆ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಸಾಗುವಳಿದಾರರು ಶಾಂತಿಯುತ ಹೋರಾಟವನ್ನೇ ನಡೆಸಿಕೊಂಡು ಬರುತ್ತಿದ್ದಾರೆ. ಸಾಗುವಳಿ ಪತ್ರ ನೀಡಲು ಉದಾಸೀನ ಬೇಡ. ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಮಾಯಕೊಂಡ ಉಪ ತಹಸೀಲ್ದಾರ್ ಕಚೇರಿ ಬಳಿ ಅನಿರ್ಧಿಷ್ಟ ಅವದಿ ಪ್ರತಿಭಟನಾ ಧರಣಿ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಜಿಲ್ಲಾಧ್ಯಕ್ಷ ಅರಸನಾಳ್ ಸಿದ್ದಪ್ಪ, ಗುಮ್ಮನೂರು ಬಸವರಾಜ, ತಾಲೂಕು ಅಧ್ಯಕ್ಷ ಪರಶುರಾಮ ಆಲೂರು, ಪ್ರಕಾಶ ಹುಚ್ಚವ್ವನಹಳ್ಳಿ ಇದ್ದರು.







