ಬೆಂಗಳೂರಿನಲ್ಲಿ ಭಾರೀ ಸ್ಫೋಟದ ಅನುಭವ
ಭೂ ಕಂಪನವಲ್ಲ: ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸ್ಪಷ್ಟನೆ

ಬೆಂಗಳೂರು, ಆ.16: ನಗರದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಸ್ಫೋಟದ ಅನುಭವ ಆಗಿದ್ದು, ಜನತೆ ಮನೆಯಿಂದ ಹೊರಗಡೆ ಬಂದು ಆತಂಕದಿಂದ ಕಾಲ ಕಳೆಯುವಂತಾಯಿತು.
ನಗರದ ಜೆಪಿನಗರ, ಜಯನಗರ, ಆರ್.ಆರ್.ನಗರ, ಕುಮಾರಸ್ವಾಮಿ ಲೇಔಟ್, ಜ್ಞಾನ ಭಾರತಿ, ಡಾಲರ್ಸ್ ಕಾಲನಿ ಸೇರಿದಂತೆ ಹಲವೆಡೆ ಮಧ್ಯಾಹ್ನ 2.30ರಿಂದ 3ರೊಳಗೆ ಭಾರೀ ಶಬ್ದ ಕೇಳಿಬಂದಿದೆ. ಇದರಿಂದಾಗಿ ನಗರದ ಜನತೆ ಕೆಲ ಹೊತ್ತು ಆತಂಕದಿಂದ ಕಾಲದೂಡಿದರು.
ಭೂ ಕಂಪನವಲ್ಲ: ನಗರದಲ್ಲಿ ಭಾರೀ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಜನತೆ ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಲ್ಲಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ಧಿ ಪ್ರಕಟಗೊಳ್ಳುತ್ತಿದ್ದಂತೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ದೇವರಾಜ್, ರಾಜ್ಯದಲ್ಲಿ ನಾಲ್ಕೈದು ಭಾಗಗಳಲ್ಲಿ ಭೂ ಕಂಪನದ ಕೇಂದ್ರಗಳಿದ್ದು, ಅಲ್ಲೆಲ್ಲಿಯೂ ಭೂ ಕಂಪನದ ಅಲೆಗಳು ದಾಖಲಾಗಿಲ್ಲ. ಹೀಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟ ಪಡಿಸಿದರು.
ರಾಜ್ಯದ ಯಾವುದೆ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದರೂ ಭೂ ಮಾಪನ ಕೇಂದ್ರದಲ್ಲಿ ದಾಖಲಾಗುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ಸಂಭವಿಸಿರುವ ಭಾರಿ ಪ್ರಮಾಣದ ಶಬ್ದ ಬೇರೆ ಕಾರಣಕ್ಕಾಗಿಯೆ ಹೊರತು ಭೂಕಂಪನಕ್ಕಾಗಿಯಲ್ಲವೆಂದು ಅವರು ಖಚಿತ ಪಡಿಸಿದರು.
ಈ ಬಗ್ಗೆ ಭೂಗರ್ಭ ವಿಜ್ಞಾನಿ ಎಚ್.ಎಸ್.ಎಂ.ಪ್ರಕಾಶ್ ಮಾಹಿತಿ ನೀಡಿ, ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಶಬ್ದ ಸಂಭವಿಸಿದ್ದು, ನನ್ನ ಅನುಭವಕ್ಕೂ ಬಂತು. ಆದರೆ, ಇದು ಭೂ ಕಂಪಿಸಿದ್ದಕ್ಕಾಗಿ ಬಂದಿದ್ದಲ್ಲ. ಗಾಳಿಯ ಸ್ಥಾನಪಲ್ಲಟದಿಂದಾಗಿ ಸಂಭವಿಸಿರುವಂತಹದೆಂದು ತಿಳಿಸಿದರು.
ಇತ್ತೀಚಿಗೆ ರಾಣೆಬೆನ್ನೂರಿನಲ್ಲಿಯೂ ಗಾಳಿಯ ಸ್ಥಾನಪಲ್ಲಟದಿಂದಾಗಿ ಪದೇ ಪದೇ ಶಬ್ದಗಳು ಸಂಭವಿಸುತ್ತಿದ್ದು, ಭೂ ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಅದೇ ಮಾದರಿಯಲ್ಲಿಯೆ ಬೆಂಗಳೂರಿನಲ್ಲಿಯೂ ಸಂಭವಿಸಿದೆ. ಬೆಂಗಳೂರಿನಲ್ಲಿ ಭೂ ಕಂಪನದ ಸಾಧ್ಯತೆ ತೀರಾ ಕಡಿಮೆ ಎಂದು ಅವರು ಸ್ಪಷ್ಟಪಡಿಸಿದರು.







