ದಾವಣಗೆರೆ: ಜಗಲೂರಿನಲ್ಲಿ ರಾಷ್ಟ್ರಕೂಟರ ಕಾಲದ ಅಪರೂಪದ ಶಿಲ್ಪಗಳು ಪತ್ತೆ

ದಾವಣಗೆರೆ, ಆ.16: ದಾವಣಗೆರೆ ಜಿಲ್ಲೆಯ ಜಗಲೂರು ತಾಲೂಕಿನ ಮುಸ್ಟೂರು ಗ್ರಾಮದ ದೇವಾಲಯವೊಂದರ ಸಮೀಪ ಹೂತು ಹೋಗಿದ್ದ ರಾಷ್ಟ್ರಕೂಟರ ಕಾಲದ ದ್ವಿಬಾಹು ಗಣೇಶ, ಸ್ಮಾರಕ ಶಿಲ್ಪಗಳು ಹಾಗೂ ಭೈರವಿ ವಿಗ್ರಹ ಪತ್ತೆಯಾಗಿರುವ ಘಟನೆ ನಡೆದಿದೆ.
ಈ ಕುರಿತಂತೆ ಶಿವಮೊಗ್ಗ ನಗರದ ಶಿವಪ್ಪನಾಯಕ ಅರಮನೆ ಆವರಣದಲ್ಲಿರುವ, ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಶೇಜೇಶ್ವರ್ ರವರು ಮಾಹಿತಿ ನೀಡಿದ್ದಾರೆ.
ಪತ್ತೆಯಾಗಿತ್ತು: ಮುಸ್ಟೂರು ಗ್ರಾಮದ ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿ ದಾಸೋಹ ಮಠದವರು, ಕಲ್ಲೇಶ್ವರ ದೇವಾಲಯ ಮುಂಭಾಗದಲ್ಲಿ ಹೆಬ್ಬಾಗಿಲು ನಿರ್ಮಿಸಲು ಮುಂದಾಗಿದ್ದರು. ಜೆಸಿಬಿ ಮುಖಾಂತರ ತಳಪಾಯ ತೆಗೆಯುತ್ತಿದ್ದಾಗ ದ್ವಿಬಾಹು ಗಣೇಶ, ಸ್ಮಾರಕ ಶಿಲ್ಪಗಳು ಹಾಗೂ ಭೈರವಿ ವಿಗ್ರಹಗಳು ಪತ್ತೆಯಾಗಿದ್ದವು. ಈ ಕುರಿತಂತೆ ಮಠದವರು ಪುರಾತತ್ವ ಇಲಾಖೆಯವರ ಗಮನಕ್ಕೆ ತಂದಿದ್ದರು.
ವಿಷಯ ತಿಳಿಯುತ್ತಿದ್ದಂತೆ ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಶೇಜೇಶ್ವರ್ ಹಾಗೂ ಚಿತ್ರದುರ್ಗದ ರಂಗಯ್ಯನ ಬಾಗಿಲು ಬಳಿಯಿರುವ ಪುರಾತತ್ವ ಸಂಗ್ರಹಾಲಯ-ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಹ್ಲಾದ್ ಜಿ. ರವರು ಭೇಟಿಯಿತ್ತು ಶಿಲ್ಪಗಳ ಪರಿಶೀಲನೆ ನಡೆಸಿದ್ದರು.
ಹಿನ್ನೆಲೆ: 1902 ರಲ್ಲಿ ಬಿ.ಎಸ್.ರೈಸ್‍ರವರು ಎಫಿಗ್ರಾಫಿಯ ಕರ್ನಾಟಕ ಪುಸ್ತಕದಲ್ಲಿ ಜಗಲೂರು ತಾಲೂಕಿನ ಶಾಸನದ ವಿವರಣೆಯಲ್ಲಿ, ಮುಸ್ಟೂರು ಗ್ರಾಮದ ಕಲ್ಲೇಶ್ವರ ದೇವಾಲಯದ ಮುಂಭಾಗದಲ್ಲಿ ನೊಳಂಬ ಪಲ್ಲವ ಅರಸನ ಕಿ.ಶ. 920 ರ ಶಾಸನವಿರುವುದನ್ನು ಉಲ್ಲೇಖಿಸಿದ್ದರು. ಇದರಿಂದ ಈ ದೇವಾಲಯ ನಿರ್ಮಾಣದ ಇತಿಹಾಸ ದೊರಕುತ್ತದೆ.
ಪ್ರಸ್ತುತ ದೇವಾಲಯವಿದ್ದು, ಬಿ.ಎಲ್.ರೈಸ್‍ರವರು ಉಲ್ಲೇಖಿಸಿದ್ದ ಶಾಸನ ಕಂಡುಬರುವುದಿಲ್ಲವಾಗಿದೆ. ಪ್ರಸ್ತುತ ಅಪರೂಪದ ಶಿಲ್ಪಗಳು ದೊರಕಿರುವ ಜಾಗದಲ್ಲಿಯೇ ಆ ಶಾಸನ ಕೂಡ ಮಣ್ಣಿನಲ್ಲಿ ಹೂತು ಹೋಗಿರುವ ಸಾಧ್ಯತೆಯಿದೆ ಎಂದು ಆರ್.ಶೇಜೇಶ್ವರ್ ರವರು ಮಾಹಿತಿ ನೀಡುತ್ತಾರೆ.
ಎರಡು ಸ್ಮಾರಕ ಶಿಲ್ಪ (ವೀರಗಲ್ಲು) ಗಳು ಒಂದೇ ರೀತಿಯಲ್ಲಿವೆ. ರಾಷ್ಟ್ರಕೂಟರ ಕಾಲದಲ್ಲಿ ದೇವರ ಬದಲು ವ್ಯಕ್ತಿಯನ್ನು ಪೀಠದಲ್ಲಿ ಕುಳ್ಳರಿಸುತ್ತಿದ್ದುದು ಕಂಡುಬರುತ್ತದೆ. ಇವುಗಳನ್ನು ವೀರಗಲ್ಲು ಎನ್ನುವುದಕ್ಕಿಂತ ಸ್ಮಾರಕ ಶಿಲ್ಪಗಳು ಎನ್ನುವುದೇ ಸೂಕ್ತವಾಗಿದೆ ಎಂದು ಇದೇ ಸಂದರ್ಭದಲ್ಲಿ ಆರ್.ಶೇಜೇಶ್ವರ್ ಅಭಿಪ್ರಾಯಪಡುತ್ತಾರೆ.







