ನಿರಂತರ ಮಳೆಗೆ ನಲುಗಿದ ಮಡಿಕೇರಿ: ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಊರಿಗೆ ಊರೇ ಜಲಾವೃತ

ಮಡಿಕೇರಿ, ಆ.16: ಮಡಿಕೇರಿ ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಕಿರು ತೊರೆ, ನದಿಗಳು ಉಕ್ಕಿ ಪ್ರವಾಹನವನ್ನು ಸೃಷ್ಟಿಸಿದರೆ, ಮತ್ತೊಂದೆಡೆ ಗುಡ್ಡ ಕುಸಿತದಿಂದಾಗಿ ಹಲವು ಗ್ರಾಮಗಳಲ್ಲಿ ಜನತೆ ಸಂಕಷ್ಟಕ್ಕೆ ಸಿಲುಕಿ ನೆರವಿಗಾಗಿ ಮೊರೆ ಇಡುತ್ತಿದ್ದಾರೆ.
ಕೆದಕಲ್ ಗ್ರಾಮ ಪಂ.ನ ಕಾಂಡನಕೊಲ್ಲಿ ಹಾಲೇರಿ ವಿಭಾಗದಲ್ಲಿ ಭಾರೀ ಪ್ರಮಾಣದ ಬರೆ ಕುಸಿದು 200 ಕ್ಕೂ ಹೆಚ್ಚಿನ ಗ್ರಾಮಸ್ಥರು ಸಂಪರ್ಕ ವ್ಯವಸ್ಥೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ನೆರವಿಗೆ ಮನವಿ ಮಾಡಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ವೀರಾಜಪೇಟೆ ತಾಲೂಕಿನ ಬೇತ್ರಿ ಸಮೀಪ ಕಾವೇರಿ ನದಿಯ ಪ್ರವಾಹದಿಂದ ದೇವಮಾನಿ ಎಂಬಲ್ಲಿ ಮನು ಎಂಬವರ ತೋಟದಲ್ಲಿ ಮೂರು ಮಂದಿ ಸಿಲುಕಿಕೊಂಡಿರುವ ಬಗ್ಗೆ ವರದಿಯಾಗಿದೆ.
ಮಡಿಕೇರಿ ನಗರದ ಸಮೀಪದಲ್ಲಿರುವ ದೇವಸ್ತೂರು ಗ್ರಾಮದಲ್ಲಿ ಗುಡ್ಡ ಕುಸಿತ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಅಲ್ಲಿನ ಅಂದಾಜು 40 ಮಂದಿ ಸಂಕಷ್ಟಕ್ಕೆ ಸಿಲುಕಿದ್ದರೆ, ಗಾಳಿಬೀಡು ಸಮೀಪದ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿತ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ 40 ಕುಟುಂಬಗಳು ಅಲ್ಲಿನ ಕುಡಿ ಹಾರಿದ ಕಲ್ಲು ಎಂಬಲ್ಲಿ ಆಶ್ರಯ ಪಡೆದಿರುವುದಾಗಿ ತಿಳಿದು ಬಂದಿದೆ.
ಮಕ್ಕಂದೂರಿನ 52 ಮಂದಿಗೆ ನೆಲೆ: ಮಕ್ಕಂದೂರಿನಲ್ಲಿ ಭಾರೀ ಗುಡ್ಡ ಕುಸಿತಗಳಿಂದ ಸಂಕಷ್ಟಕ್ಕೆ ಸಿಲುಕಿದ 52 ಮಂದಿಗೆ ಕೆ. ನಿಡುಗಣೆಯ ಕರ್ಣಂಗೇರಿ ಗ್ರಾಮದ ಗಂಜಿ ಕೇಂದ್ರದಲ್ಲಿ ಆಶ್ರಯವನ್ನು ನೀಡಲಾಗಿದೆ.
ವೀರಾಜಪೇಟೆ ಸಂಪರ್ಕ ಕಡಿತ: ಮಡಿಕೇರಿಯ ಅನತಿ ದೂರದಲ್ಲೆ ವೀರಾಜಪೇಟೆ ರಸ್ತೆಯ ಒಂದು ಪಾರ್ಶ್ವ ಕುಸಿದು ಗುರುವಾರ ಬೆಳಗ್ಗಿನಿಂದಲೆ ಸಂಪರ್ಕ ಕಡಿತಗೊಂಡಿದೆ. ಸೋಮವಾರಪೇಟೆಯಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಹಲವೆಡೆಗಳಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದಲ್ಲದೆ, ರಸ್ತೆ ಕುಸಿದಿರುವುದರಿಂದ ಸಂಪರ್ಕ ಕಡಿತಗೊಂಡಿದೆ.
ಹಾರಂಗಿ ಜಲಾಶಯದಿಂದ ಗುರುವಾರ ಬೆಳಗಿನಿಂದ ಸುಮಾರು 80ಸಾವಿರ ಕ್ಯುಸೆಕ್‍ನಷ್ಟು ನೀರನ್ನು ಹೊರಬಿಡಲಾಗಿದೆ. ಪರಿಣಾಮವಾಗಿ ಕುಶಾಲನಗರ-ಹಾಸನ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇತ್ತ ಕಾವೇರಿ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕುಶಾಲನಗರದ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಕುಶಾಲನಗರದ ಗಂಧದ ಕೋಠಿ ಬಳಿ ಕಾವೇರಿ ನೀರು ರಾಷ್ಟ್ರೀಯ ಹೆದ್ದಾರಿ ಮೇಲೆ ಬಂದಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ.
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸತತ ನಾಲ್ಕನೇ ದಿನವೂ ಬಂದ್ ಆಗಿದ್ದು, ಮದೆನಾಡು ಬಳಿ ಕುಸಿದ ಮಣ್ಣನ್ನು ತೆರವುಗೊಳಿಸುತ್ತಿದ್ದಂತೆ ಮತ್ತೆ ಹಲವು ಭಾಗಗಳಲ್ಲಿ ಬರೆ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲಾಗಿದೆ.
ಮಡಿಕೇರಿ-ವೀರಾಜಪೇಟೆ, ಮಡಿಕೇರಿ-ಸೋಮವಾರಪೇಟೆ- ಸಕಲೇಶಪುರ ರಸ್ತೆಗಳು ಬಂದ್ ಆಗಿವೆ. ಮಡಿಕೇರಿ ಸಮೀಪದ ಕಾಲೂರಿನ ಜನರು ದ್ವೀಪವಾಸಿಗಳಂತಾಗಿದ್ದಾರೆ. ಮಡಿಕೇರಿ-ಮಾಂದಲಪಟ್ಟಿ ನಡುವಿನ ರಸ್ತೆಗೆ ಬರೆ ಕುಸಿದ ಪರಿಣಾಮ ಆ ಭಾಗದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹದ ನೀರು ಹೆಚ್ಚುತ್ತಿದೆ. ವೀರಾಜಪೇಟೆ ತಾಲೂಕಿನ ಕರಡಿಗೋಡುವಿನ ಹಲವು ಮನೆಗಳು ಮುಳುಗುವ ಹಂತಕ್ಕೆ ಬಂದು ತಲುಪಿದೆ. ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆಪ್ಪದ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಸಂತ್ರಸ್ತರಿಗೆ ಸರಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.
ಪೊನ್ನಂಪೇಟೆ-ಕುಟ್ಟದ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿನ ಕಾನೂರು ಸೇತುವೆಯ ಒಂದು ಭಾಗ ಕುಸಿದಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಹೆದ್ದಾರಿಯ ಹಲವು ಭಾಗಗಳಲ್ಲಿ ಮರಗಳು ಬಿದ್ದು ಹಾನಿಯಾಗಿದೆ.
ಮುಖ್ಯಮಂತ್ರಿ ಪ್ರತಿಕ್ರಿಯೆ
ಕೊಡಗು ಜಿಲ್ಲೆಯ ಮಳೆಯ ಅವಾಂತರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತೀ 10 ನಿಮಿಷಕ್ಕೊಮ್ಮೆ ಮಾಹಿತಿ ಪಡೆಯಲಾಗುತ್ತಿದ್ದು, ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಸುವಂತೆ ಸೂಚನೆ ನೀಡಲಾಗಿದೆ. ಲೋಕೋಪಯೋಗಿ ಸಚಿವರು ಕೊಡಗಿನಲ್ಲಿ ಮೊಕ್ಕಾಂ ಹೂಡಿದ್ದು, ಪರಿಹಾರ ಕಾರ್ಯಕ್ಕೆ ಹಣದ ಕೊರತೆಯಿಲ್ಲ ಎಂದಿದ್ದಾರೆ.
ಮಡಿಕೇರಿ ತಾಲೂಕಿನಾದ್ಯಂತ ವಿಪರೀತ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದಾಗಿ ಜನತೆ ಸಂಕಷ್ಟಕ್ಕೀಡಾಗಿದ್ದು, ಮಡಿಕೇರಿ ನಗರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮಕ್ಕಂದೂರು, ಇಂದಿರಾನಗರ, ಚಾಮುಂಡೇಶ್ವರಿ ನಗರದಲ್ಲಿ ರಕ್ಷಣೆ ಮತ್ತು ನೆರವು ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಇದರೊಂದಿಗೆ ಸೇವಾ ಭಾರತಿ ವತಿಯಿಂದ ಮಡಿಕೇರಿಯ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಅತಿವೃಷ್ಟಿಯಿಂದ ನಿರಾಶ್ರಿತರಾವರು ಮಹೇಶ್(9480731020), ಜಗದೀಶ್ (9448206688), ಅರುಣ್ (8618978754) ಧನಂಜಯ್ (9449731238) ಅಥವಾ ಚಂದ್ರ (9663725200) ಅವರನ್ನು ಸಂಪರ್ಕಿಸಬಹುದಾಗಿದೆ.
ಕುಶಾಲನಗರ ಜಲಾವೃತ
ವಿಪರೀತ ಮಳೆಯಿಂದಾಗಿ ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಈಗಾಗಲೇ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇದು ಇನ್ನಷ್ಟು ತೀವ್ರಗೊಳ್ಳುವ ಸಂಭವವಿದ್ದು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಕುಶಾಲನಗರ ಪಟ್ಟಣದಾದ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತುರ್ತು ಸೇವಾ ತಂಡವನ್ನು ರಚಿಸಿದೆ. ಈಗಾಗಲೇ ದಂಡಿನಪೇಟೆ, ಇಂದಿರಾ ಬಡಾವಣೆ, ಯೋಗಾನಂದ ಬಡಾವಣೆ, ಕುವೆಂಪು ಬಡಾವಣೆ, ಸಾಯಿ ಬಡಾವಣೆ ಭಾಗದಲ್ಲಿ ಕಾರ್ಯಕರ್ತರು ರಕ್ಷಣೆ ಮತ್ತು ಸಹಾಯ ಕಾರ್ಯದಲ್ಲಿ ತೊಡಗಿದ್ದಾರೆ.
ಅಪಾಯದಲ್ಲಿ ಕೂಡಿಗೆ ಸೇತುವೆ: ಇತ್ತ ಹಾರಂಗಿ ಜಲಾಶಯದಿಂದ 80 ಸಾವಿರ ಕ್ಯುಸೆಕ್‍ಗಿಂತಲೂ ಅಧಿಕ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಪರಿಣಾಮವಾಗಿ ಕೂಡಿಗೆಯಲ್ಲಿರುವ ನೂತನ ಸೇತುವೆ ಅಪಾಯಕ್ಕೆ ಸಿಲುಕಿದೆ. ಸೇತುವೆಯ ಬದಿಯ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸಂಸದ ಪ್ರತಾಪ್‍ಸಿಂಹ ಭೇಟಿ: ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದಿಂದ ನೀರನ್ನು ಹೊರ ಬಿಡುತ್ತಿರುವುದರಿಂದ ಕುಶಾಲನಗರದ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡಿವೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಗುರುವಾರ ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಹಾರಂಗಿ ರಸ್ತೆ ಮತ್ತು ಕೂಡಿಗೆಗೆ ಭೇಟಿ ನೀಡಿ ಗಂಜಿ ಕೇಂದ್ರ ತೆರೆಯಲು ವ್ಯವಸ್ಥೆ ಮಾಡಿದ್ದಾರೆ. ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂದರ್ಭ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಪ್ಪಣ್ಣ ಕರ್ನಾಟಕ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.
ಗೋಣಿಕೊಪ್ಪದಲ್ಲೂ ಪ್ರವಾಹ
ಪಟ್ಟಣದ ಮೂಲಕ ಹರಿಯುವ ಕೀರೆಹೊಳೆ ಉಕ್ಕಿ ಹರಿಯುತ್ತಿದೆ. ಹೊಳೆ ದಂಡೆಯಲ್ಲಿ ನಿರ್ಮಿಸಿಕೊಂಡಿರುವ ಮನೆಗಳತ್ತ ನೀರು ನುಗ್ಗುತ್ತಿರುವುದರಿಂದ ಆತಂಕ ಮೂಡಿಸಿದೆ. ಪ್ರವಾಹ ಹೆಚ್ಚಾಗಿರುವುದರಿಂದ ಅಗತ್ಯ ಬಿದ್ದರೆ ಅಲ್ಲಿನ ನಿವಾಸಿಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ.
ಬೀರುಗ ಗ್ರಾಮದಲ್ಲಿ ಮಳೆಗೆ ಮನೆಯ ಗೋಡೆ ಕುಸಿದ ಘಟನೆ ನಡೆದಿದೆ. ಅಲ್ಲಿನ ಅಣ್ಣಳಮಾಡ ಜಾಜಿ ಎಂಬವರಿಗೆ ಸೇರಿದ ವಾಸದ ಮನೆಯ ಎದುರಿನ ಗೋಡೆ ಕುಸಿದಿದೆ. ಮನೆಯಲ್ಲಿ ಮೂವರು ವಾಸಿಸುತ್ತಿದ್ದು, ಮನೆಯ ಉಳಿದ ಭಾಗ ವಾಸಕ್ಕೆ ಯೋಗ್ಯವಾಗಿರುವುದರಿಂದ ಅಲ್ಲಿಯೇ ಉಳಿದುಕೊಂಡಿದ್ದಾರೆ. ಶ್ರೀಮಂಗಲ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗ ಬಸವಣ್ಣಗೌಡ ಸ್ಥಳ ಪರಿಶೀಲನೆ ನಡೆಸಿದರು.
ಸಿಎಂ ಭೇಟಿಯಾದ ನಿಯೋಗ
ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಪರಿಶೀಲನೆಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ಕಳುಹಿಸುವುದರೊಂದಿಗೆ, ತುರ್ತು ಪರಿಹಾರ ಕಾರ್ಯಗಳಿಗೆ ಹೆಲಿಕಾಪ್ಟರ್ ಕಳುಹಿಸಿಕೊಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ಎಂ.ಕೆ. ಪ್ರಾಣೇಶ್, ಅರುಣ್ ಶಹಾಪುರ ಅವರು ಗುರುವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿದರು.
ಕೊಡಗು ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಮತ್ತು ಕಳೆದ ಮೂರು ದಿನಗಳಿಂದ ಉಂಟಾಗಿರುವ ಮಳೆಯ ರುದ್ರ ನರ್ತನದಿಂದ ಜಿಲ್ಲೆಯಲ್ಲಿನ ಹಲವು ಗ್ರಾಮಗಳು ಮತ್ತು ರಸ್ತೆಗಳು ಕೊಚ್ಚಿ ಹೋಗಿದ್ದು, ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು. ಜಿಲ್ಲೆಯಲ್ಲಿನ ಗ್ರಾಮಗಳು ದ್ವೀಪವಾಗಿ ಪರಿಣಮಿಸಿವೆ. ಜಿಲ್ಲೆಯಲ್ಲಿನ ಜನರ ಸಮಸ್ಯೆಗಳಿಗೆ ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ನಿಯೋಗದಲ್ಲಿದ್ದವರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಜಿಲ್ಲೆಗೆ ಉಸ್ತುವಾರಿ ಕಾರ್ಯದರ್ಶಿಗಳನ್ನು ಕಳುಹಿಸಲಾಗುವುದು ಮತ್ತು ತುರ್ತು ಕ್ರಮಗಳಿಗೆ ಹಣದ ತೊಂದರೆ ಇಲ್ಲ ಎಂದು ತಿಳಿಸಿದರಲ್ಲದೆ, ತುರ್ತು ಕ್ರಮಗಳಿಗೆ ಹೆಲಿಕಾಪ್ಟರ್ ಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದರು.







