ಶಿವಮೊಗ್ಗ: ಮನೆ ಗೋಡೆ ಕುಸಿದು ಬಾಲಕ ಮೃತ್ಯು
ಜಿಲ್ಲಾಡಳಿತದಿಂದ 5 ಲಕ್ಷ ರೂ. ಪರಿಹಾರ ವಿತರಣೆ
![ಶಿವಮೊಗ್ಗ: ಮನೆ ಗೋಡೆ ಕುಸಿದು ಬಾಲಕ ಮೃತ್ಯು ಶಿವಮೊಗ್ಗ: ಮನೆ ಗೋಡೆ ಕುಸಿದು ಬಾಲಕ ಮೃತ್ಯು](https://www.varthabharati.in/sites/default/files/images/articles/2018/08/16/148436.jpg)
ಶಿವಮೊಗ್ಗ, ಆ. 16: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಕೆಇಬಿ ರಸ್ತೆಯಲ್ಲಿ ಮನೆಯೊಂದರ ಗೋಡೆ ಕುಸಿದು ಬಾಲಕನೋರ್ವ ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಕೂಲಿ ಕಾರ್ಮಿಕ ಅಯ್ಯುಬ್ ಎಂಬವರ ಪುತ್ರ ಮಸೂದ್ (4) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾಧಿಕಾರಿ ಡಾ. ದಯಾನಂದ, ಜಿಲ್ಲಾ ರಕ್ಷಣಾಧಿಕಾರ ಅಭಿನವ್ ಖರೆ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು.
ಘಟನೆ ನಡೆದ ಕೆಲ ಗಂಟೆಗಳಲ್ಲಿಯೇ ಜಿಲ್ಲಾಡಳಿತವು ಮೃತ ಬಾಲಕನ ಕುಟುಂಬಕ್ಕೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ 5 ಲಕ್ಷ ರೂ. ಮೊತ್ತದ ಪರಿಹಾರ ಚೆಕ್ ವಿತರಿಸಿದೆ. ಜಿಲ್ಲಾಧಿಕಾರಿ ಡಾ. ದಯಾನಂದ್‍ರವರು ಕುಟುಂಬ ಸದಸ್ಯರಿಗೆ ಚೆಕ್ ವಿತರಿಸಿ, ಸರ್ಕಾರದಿಂದ ದೊರಕುವ ಎಲ್ಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ.
ಘಟನೆ ಹಿನ್ನೆಲೆ: ಕೋಣಂದೂರು ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಅಯ್ಯೂಬ್‍ರವರ ಮನೆಯ ಗೋಡೆ ನೀರಿನಲ್ಲಿ ನೆನೆದಿತ್ತು. ಗುರುವಾರ ಕುಟುಂಬ ಸದಸ್ಯರು ಮನೆಯಲ್ಲಿ ಟೀ ಕುಡಿಯುವ ವೇಳೆ, ಏಕಾಏಕಿ ಗೋಡೆ ಬಾಲಕನ ಮೇಲೆ ಕುಸಿದು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ದಿಢೀರ್ ನಡೆದ ಘಟನೆಯಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸುತ್ತಮುತ್ತಲಿನ ನೂರಾರು ಜನರು ಆಗಮಿಸಿದ್ದರು.