ದನದ ವ್ಯಾಪಾರಿ ಹುಸೇನಬ್ಬ ಕೊಲೆ ಪ್ರಕರಣ: ಪ್ರಮುಖ ಆರೋಪಿಗಳ ಜಾಮೀನು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು, ಆ.16: ದನದ ವ್ಯಾಪಾರಿಯಾಗಿದ್ದ ಹುಸೇನಬ್ಬ ಜೋಕಟ್ಟೆ ಅವರನ್ನು ಉಡುಪಿಯ ಪೆರ್ಡೂರಿನಲ್ಲಿ ಕೊಲೆ ಮಾಡಿದ್ದ ಬಜರಂಗದಳದ ಪ್ರಮುಖ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ದನದ ವ್ಯಾಪಾರ ಮಾಡಿಕೊಂಡಿದ್ದ ಹುಸೇನಬ್ಬ ಜೋಕಟ್ಟೆ ಅವರನ್ನು ಕಳೆದ ಮೇ ತಿಂಗಳಲ್ಲಿ ಪೊಲೀಸರ ಎದುರಲ್ಲೇ ತಡೆದು ನಿಲ್ಲಿಸಿ ಬಜರಂಗದಳದ ಗೂಂಡಾಗಳು ದೈಹಿಕ ಹಲ್ಲೆ ನಡೆಸಿದ್ದರು. ತದ ನಂತರ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟಿದ್ದೆಂದು ಇಲಾಖಾ ತನಿಖೆಯ ವೇಳೆ ಬಹಿರಂಗಗೊಂಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಠಾಣಾಧಿಕಾರಿ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕೂಡ ಕರ್ತವ್ಯ ಲೋಪದ ಆಧಾರದಲ್ಲಿ ಬಂಧಿಸಲಾಗಿತ್ತು. ಇದೀಗ ಬಜರಂಗದಳದ ಆರು ಪ್ರಮುಖ ಆರೋಪಿಗಳ ಜಾಮೀನನ್ನು ಹೈಕೋರ್ಟ್ ನಿರಾಕರಿಸಿದೆ. ಈಗ ಅವರಿಗೆಲ್ಲ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವುದು ಮಾತ್ರ ಬಾಕಿಯುಳಿದಿದೆ.
ಕಾರವಾರ ಜೈಲಿನಲ್ಲಿ ಇಂದು ಆರೋಪಿಗಳ ಗುರುತು ಹಚ್ಚುವ ಪೆರೇಡ್ ನಡೆದಿತ್ತು. ಅಲ್ಲಿ ಸಾಕ್ಷಿಗಳು ಎಲ್ಲ ಆರೋಪಿಗಳನ್ನು ಗುರುತಿಸಿದ್ದರು. ಇದರಿಂದಾಗಿ ಹೈಕೋರ್ಟಿನಲ್ಲಿ 2ನೇ, 4ನೇ, 6ನೇ, 7ನೇ, 14ನೇ ಹಾಗೂ 15ನೇ ಆರೋಪಿಗಳು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯು ತಿರಸ್ಕೃತಗೊಂಡು ಆರೋಪಿಗಳಿಗೆ ಜೈಲೇ ಗತಿಯಾಗಿದೆ.
ಪ್ರಕರಣದ 9ನೇ ಹಾಗೂ 10ನೇ ಆರೋಪಿಗಳಾದ ಪೊಲೀಸರಿಬ್ಬರಿಗೆ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ರಾಜ್ಯ ಸರಕಾರದ ಪರವಾಗಿ ಚಂದ್ರಮೌಳಿ ವಾದಿಸಿದರೆ, ದೂರುದಾರರ ಪರವಾಗಿ ಅಬ್ದುಲ್ ಲತೀಫ್ ಬಡಗನ್ನೂರು ವಾದಿಸಿದ್ದರು. ಆರೋಪಿಗಳ ಪರವಾಗಿ ಬಿ.ವಿ. ಆಚಾರ್ಯ ವಾದಿಸಿದ್ದರು.







