ಸೌಹಾರ್ದತೆ ಅಗತ್ಯ: ತಮಿಳುನಾಡು, ಕೇರಳಕ್ಕೆ ಸುಪ್ರೀಂ ಕಿವಿಮಾತು
ಮಲ್ಲಪೆರಿಯಾರ್ ಅಣೆಕಟ್ಟು ವಿವಾದ

ಕೊಚ್ಚಿ, ಆ.16: ಕೇರಳದಲ್ಲಿ ನೆರೆಪರಿಸ್ಥಿತಿ ಗಂಭೀರವಾಗಿರುವ ಈ ಸಮಯದಲ್ಲಿ ವಿರೋಧಾಭಾಸದ ಹೇಳಿಕೆ ನೀಡದೆ ಸೌಹಾರ್ದತೆಯಿಂದ ವರ್ತಿಸುವಂತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಕಿವಿಮಾತು ಹೇಳಿದೆ.
ಮಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಬಿಡುವ ವಿಷಯದಲ್ಲಿ ಇದೀಗ ಎರಡೂ ರಾಜ್ಯಗಳ ಮಧ್ಯೆ ವಿವಾದ ತಲೆದೋರಿದೆ. ಮಲ್ಲಪೆರಿಯಾರ್ ಅಣೆಕಟ್ಟು ತಮಿಳುನಾಡಿನಲ್ಲಿದೆ. ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಅಪಾಯಮಟ್ಟ ಮೀರಿರುವ ಕಾರಣ ನೀರನ್ನು ಹೊರಬಿಡುತ್ತಿರುವುದಾಗಿ ತಮಿಳುನಾಡು ಸರಕಾರ ಹೇಳುತ್ತಿದೆ. ಆದರೆ ಈ ಅಣೆಕಟ್ಟೆಯಿಂದ ಹೊರಬರುವ ನೀರು ಕೇರಳದಲ್ಲಿ ಹರಿಯುತ್ತದೆ. ಈಗ ಕೇರಳದಲ್ಲಿ ನೆರೆ ಪರಿಸ್ಥಿತಿಯಿದೆ. ಇದರ ಮಧ್ಯೆ, ಹೆಚ್ಚುವರಿ ನೀರು ಕೂಡಾ ಸೇರಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂಬುದು ಕೇರಳದ ವಾದವಾಗಿದೆ. ಈ ವಿವಾದದ ಬಗ್ಗೆ ಕಿವಿಮಾತು ಹೇಳಿರುವ ಸುಪ್ರೀಂಕೋರ್ಟ್ ಸೌಹಾರ್ದತೆಯಿಂದ ಕಾರ್ಯ ನಿರ್ವಹಿಸುವಂತೆ ಉಭಯ ರಾಜ್ಯಗಳಿಗೆ ತಿಳಿಸಿದೆ. ಅಲ್ಲದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ಸಭೆ ಕರೆದು, ಅಣೆಕಟ್ಟಿನಲ್ಲಿ ನೀರಿನ ಮಟ್ಟ ತಗ್ಗಿಸುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಹಾಗೂ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಿ ತಮಿಳುನಾಡು ಮತ್ತು ಕೇರಳ ಸರಕಾರಗಳಿಗೆ ನೀಡುವಂತೆ ಮತ್ತು ಈ ಕುರಿತ ವರದಿಯನ್ನು ತನಗೆ ಸಲ್ಲಿಸಬೇಕೆಂದು ತಿಳಿಸಿ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನಕ್ಕೆ ಮುಂದೂಡಿದೆ.





