ಕೊಡಗು ಮಹಾಮಳೆ: ಮುದ್ರಣವನ್ನೇ ನಿಲ್ಲಿಸಿದ 'ಶಕ್ತಿ' ಪತ್ರಿಕೆ

ಮಡಿಕೇರಿ, ಆ.17: ಮಹಾಮಳೆಯ ಆರ್ಭಟಕ್ಕೆ ಪತ್ರಿಕಾ ಕಚೇರಿ ಹಾಗೂ ಮುದ್ರಣ ಯಂತ್ರ ಹಾನಿಗೀಡಾಗಿರುವ ಘಟನೆ ನಡೆದಿದೆ.
ಸುಮಾರು 60 ವರ್ಷಗಳ ಇತಿಹಾಸ ಹೊಂದಿರುವ ಕೊಡಗಿನ 'ಶಕ್ತಿ' ದಿನ ಪತ್ರಿಕೆಯ ಮಡಿಕೇರಿಯ ಪ್ರಧಾನ ಕಚೇರಿ ಜಲಾವೃತಗೊಂಡು ಮುದ್ರಣವೇ ಸ್ಥಗಿತಗೊಂಡಿದೆ. ಕಚೇರಿಯ ಎದುರು ಭಾಗದ ಗುಡ್ಡ ಕುಸಿದ ಪರಿಣಾಮ ತೋಡಿನ ನೀರು ರಸ್ತೆಗೆ ಹರಿದು ಶಕ್ತಿ ಕಾರ್ಯಾಲಯವನ್ನು ವ್ಯಾಪಿಸಿದೆ. ನೋಡನೋಡುತ್ತಿದ್ದಂತೆ ಕಟ್ಟಡದ ತುಂಬಾ ನೀರು ತುಂಬಿದ್ದು, ಸಿಬ್ಬಂದಿಗಳು ಅಪಾಯಕ್ಕೆ ಸಿಲುಕುವ ಹಂತದಲ್ಲಿ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣೆ ಮಾಡಿದರು.
ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ಮುದ್ರಣ ಯಂತ್ರ ಸಂಪೂರ್ಣ ಹಾನಿಗೀಡಾಗಿದ್ದು, ಸುಮಾರು 10 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ತಿಳಿಸಿದ್ದಾರೆ. ಸುಮಾರು ಒಂದು ವಾರ ಕಾಲ ಪತ್ರಿಕೆ ಮುದ್ರಣಗೊಳ್ಳುವುದು ಅಸಾಧ್ಯವೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ 60 ವರ್ಷಗಳಲ್ಲಿ ಸುದೀರ್ಘ ದಿನಗಳವರೆಗೆ ಪತ್ರಿಕೆ ಮುದ್ರಣಗೊಳ್ಳದೆ ಇರುವುದು ಇದೇ ಮೊದಲೆಂದು ರಾಜೇಂದ್ರ ಹೇಳಿದ್ದಾರೆ.
ಇದೀಗ ಜೆಸಿಬಿ ಯಂತ್ರದ ಮೂಲಕ ಗುಡ್ಡದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಪತ್ರಿಕಾ ಕಾರ್ಯಾಲಯ ಜಲಮುಕ್ತವಾಗಿದೆ.







