ಮೈಸೂರು: ಜಿಲ್ಲಾಡಳಿತದ ವತಿಯಿಂದ ನೆರೆ ಸಂತ್ರಸ್ತರ ಅವಶ್ಯಕ ಸಾಮಗ್ರಿಗಳ ಸ್ವೀಕಾರ ಕೇಂದ್ರ ಸ್ಥಾಪನೆ
ಮೈಸೂರು,ಆ.17: ಕೊಡಗು ಸೇರಿದಂತೆ ವಿವಿಧ ಭಾಗಗಳಲ್ಲಿ ಉಂಟಾಗಿರುವ ನೆರೆಹಾವಳಿಗೆ ಸಿಲುಕಿರುವ ಸಂತ್ರಸ್ತರಿಗೆ ಸಾರ್ವಜನಿಕರು ತುರ್ತು ಅವಶ್ಯಕ ಸಾಮಾಗ್ರಿಗಳನ್ನು ನೀಡಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಪುರಭವನದಲ್ಲಿ ಅವಶ್ಯಕ ಸಾಮಾಗ್ರಿಗಳ ಸ್ವೀಕಾರ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಈ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಲು ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಹಾಗೂ ಪರಿಸರ ಅಧಿಕಾರಿಗಳನ್ನು ನಿಯೋಜಿಸಿ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ. ದಾನಿಗಳು ಹಾಗೂ ಸಂಘ ಸಂಸ್ಥೆಗಳು ನೀಡುವ ತುರ್ತು ಅವಶ್ಯಕ ಸಾಮಗ್ರಿಗಳನ್ನು ಈ ಕೇಂದ್ರದಲ್ಲಿ ಅಧಿಕೃತವಾಗಿ ಸ್ವೀಕರಿಸಲಾಗುವುದು. ದಾನಿಗಳು ನೀಡಿದ ಸಾಮಗ್ರಿಗಳನ್ನು ನಿಗದಿತ ಸಹಿಯಲ್ಲಿ ದಾಖಲಿಸಿ, ಅಧಿಕೃತವಾಗಿ ಜಿಲ್ಲಾಡಳಿತದ ಮೂಲಕ ಕೊಡಗು ಹಾಗೂ ಇತರೆ ನೆರೆಹಾವಳಿ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಸಾಮಗ್ರಿಗಳ ಸ್ವೀಕಾರ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಪಾಲಿಕೆಯ ಆರೋಗ್ಯ ಅಧಿಕಾರಿ ನಾಗರಾಜು, ಪರಿಸರ ಇಂಜಿನಿಯರ್ ಮೈತ್ರಿ, ಆರೋಗ್ಯ ಪರಿವೀಕ್ಷಕರಾದ ಯೋಗೇಶ್, ದರ್ಶನ್, ಅಶ್ವತ್ಥ್, ಮಂಜುನಾಥ್ ಹಾಗೂ ಜಯಂತಿ ಅವರನ್ನು ನಿಯೋಜಿಸಲಾಗಿದೆ.
ದಾನಿಗಳು, ಸಂಘಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ನಗರ ಪಾಲಿಕೆ ಕಂಟ್ರೋಲ್ ರೂಂ ಸಂಖ್ಯೆ: 9449841195/96, 0821-2418800 ನ್ನು ಸಂಪರ್ಕಿಸಬಹುದು ಎಂದು ಕೋರಲಾಗಿದೆ.
,




