ಸಕಲೇಶಪುರ: ಗುಡ್ಡ ಕುಸಿದು ಅಪಾಯದಲ್ಲಿದ್ದ ರೈಲ್ವೆ ಇಲಾಖೆಯ 12 ಸಿಬ್ಬಂದಿಗಳ ರಕ್ಷಣೆ
ಸಕಲೇಶಪುರ,ಆ.17: ಮಂಗಳೂರು ಮಾರ್ಗದ ರೈಲ್ವೆ ಹಳಿಮೇಲೆ ಕುಸಿದ ಮಣ್ಣು ತೆರವಿಗೆ ತೆರಳಿ ಎರಡು ದಿನಗಳಿಂದ ಅಪಾಯದಲ್ಲಿ ಸಿಲುಕಿದ್ದ ರೈಲ್ವೆ ಇಲಾಖೆಯ 12 ಸಿಬ್ಬಂದಿಗಳನ್ನು ಉಪವಿಭಾಗಧಿಕಾರಿ ನೇತೃತ್ವದಲ್ಲಿ ಸತತ ಆರು ಗಂಟೆ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದೆ.
ಉಪವಿಭಾಗಾಧಿಕಾರಿ ನೇತೃತ್ವದ ತಂಡ, ನಾಲ್ಕು ದಿನಗಳ ಹಿಂದೆ ಸಕಲೇಶಪುರ ಹಾಗೂ ಮಂಗಳೂರು ನಡುವಿನ ರೈಲ್ವೆ ಮಾರ್ಗದ ಯಡಕುಮೇರಿ ಬಳಿ ರೈಲ್ವೆ ಹಳಿಮೇಲೆ ಕುಸಿದಿದ್ದ ಗುಡ್ಡ ತೆರವುಮಾಡಲು ತೆರಳಿದ್ದ 12 ಮಂದಿಯನ್ನು ರಕ್ಷಣೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೆಲಿಕಾಫ್ಟರ್ ಮೂಲಕ ರಕ್ಷಣೆ ಮಾಡುವಂತೆ ರೈಲ್ವೆ ಇಲಾಖೆ ಮಾಡಿದ್ದ ಮನವಿಗೆ ತುರ್ತು ಸ್ಪಂದಿಸಿದ ಜಿಲ್ಲಾಡಳಿತ, ಸುರಿಯುತ್ತಿರುವ ಮಳೆಯ ಹೆಲಿಕಾಫ್ಟರ್ ಬಳಕೆ ಅಸಾಧ್ಯ ಅನ್ನುವುದನ್ನು ಅರಿತು ಸ್ವತಃ ಕಾರ್ಯಾಚರಣೆಗಿಳಿದಿದ್ದರು. ಲಕ್ಷ್ಮಿಕಾಂತರೆಡ್ಡಿ ಮತ್ತು ತಂಡ ಬೆಳಗ್ಗೆ 6 ಗಂಟೆಯಿಂದ ಸತತ ನಾಲ್ಕು ಗಂಟೆ ಸುರಿಯುವ ಮಳೆಯ ನಡುವೆಯೇ ಟ್ರಕ್ಕಿಂಗ್ ಮೂಲಕ ತೆರಳಿ ಅಪಾಯದಲ್ಲಿದ್ದವರನ್ನು ರಕ್ಷಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.