ಮುಳುಗಿದ ಕೊಡಗು...
ವರುಣನ ಆರ್ಭಟಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆ ಹೊರ ಪ್ರದೇಶಗಳ ಸಂಪರ್ಕ ಕಳೆದುಕೊಂಡು ಅಕ್ಷರಶಃ ದ್ವೀಪ ದಂತಾಗಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಉಂಟಾದ ಭಾರೀ ಭೂ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕಳೆದುಕೊಂಡಿದ್ದ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಶುಕ್ರವಾರ ಜಿಲ್ಲೆಯ ಇತರ ಭಾಗಗಳ ಸಂಪರ್ಕವನ್ನೂ ಕಡಿದುಕೊಂಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗಾಗಿ ಕಾರವಾರದಿಂದ ನೌಕಾಪಡೆ ಆಗಮಿಸಲಿದೆ ಮತ್ತು ಈಗಾಗಲೇ 70 ಯೋಧರು ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿನ ಕಾರ್ಯಾಚರಣೆಯಲ್ಲಿ ತೊಡಗುವ ಮೂಲಕ ತೊಂದರೆಯಲ್ಲಿ ಸಿಲುಕಿದವರ ರಕ್ಷಣೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆೆಯಿಂದ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಮಂಗಳೂರಿನಿಂದ 80 ಯೋಧರ ತಂಡ ಜಿಲ್ಲೆಗೆ ಆಗಮಿಸುತ್ತಿದೆ. ಮೈಸೂರು, ಹಾಸನದಿಂದ ಕಂದಾಯ, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆಯೆಂದು ಮಾಹಿತಿಯನ್ನಿತ್ತರು. ಗುರುವಾರ ಸಂಜೆ ಮಡಿಕೇರಿ -ತಾಳತ್ ಮನೆ ನಡುವೆ ದರೆ ಕುಸಿದಿದ್ದರೆ, ಮಡಿಕೇರಿ -ವೀರಾಜಪೇಟೆ ರಸ್ತೆಯಲ್ಲಿ ಬೆಟ್ಟ ಕುಸಿದ ಪರಿಣಾಮ ಆ ಮಾರ್ಗದಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆ.





