ಮಡಿಕೇರಿ: ಹಲವು ದಿನಗಳ ನಂತರ ಬಿಡುವು ನೀಡಿದ ಮಳೆ

ಮಡಿಕೇರಿ, ಆ.18 : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಶನಿವಾರ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆಗಳಲ್ಲಿ ಶನಿವಾರ ಕೆಲ ಕಾಲ ಬಿಸಿಲಿನ ವಾತಾವರಣದ ಜೊತೆಗೆ ಮಂಜು, ಮಳೆ ಕಾಣಿಸಿಕೊಂಡಿದೆ.
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 67.89 ಮಿ.ಮೀ. ಮಳೆಯಾಗಿದ್ದು, ಮಡಿಕೇರಿ ತಾಲೂಕಿನಲ್ಲಿ 135.60 ಮಿ.ಮೀ. ವೀರಾಜಪೇಟೆ ತಾಲೂಕಿನಲ್ಲಿ 27.90 ಮಿ.ಮೀ. ಸೋಮವಾರಪೇಟೆ ತಾಲೂಕಿನಲ್ಲಿ 40.17 ಮಿ.ಮೀ.ಮಳೆಯಾದ ಬಗ್ಗೆ ವರದಿಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 310, ನಾಪೋಕ್ಲು 35.20, ಸಂಪಾಜೆ 96, ಭಾಗಮಂಡಲ 101.20, ವೀರಾಜಪೇಟೆ ಕಸಬಾ 27.80, ಹುದಿಕೇರಿ 48, ಶ್ರೀಮಂಗಲ 39, ಪೊನ್ನಂಪೇಟೆ 18.60, ಅಮ್ಮತ್ತಿ 19, ಬಾಳೆಲೆ 15, ಸೋಮವಾರಪೇಟೆ ಕಸಬಾ 40, ಶನಿವಾರಸಂತೆ 33.20, ಶಾಂತಳ್ಳಿ 89.20, ಕೊಡ್ಲಿಪೇಟೆ 19.40, ಕುಶಾಲನಗರ 12, ಸುಂಟಿಕೊಪ್ಪ 47.20 ಮಿ.ಮೀ.ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಶನಿವಾರ ಜಲಾಶಯದ ನೀರಿನ ಮಟ್ಟವನ್ನು 2853.12 ಅಡಿಗಳಿಗೆ ಕಾಯ್ದಿರಿಸಿಕೊಂಡು ನದಿಗೆ 46277 ಕ್ಯುಸೆಕ್ ಹಾಗೂ ನಾಲೆಗೆ 833 ಕ್ಯುಸೆಕ್ ನೀರನ್ನು ಹರಿಯಬಿಡಲಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 2854.99 ಅಡಿ ನೀರು ಸಂಗ್ರಹವಾಗಿದ್ದರೆ, ನದಿಗೆ 450 ಹಾಗೂ ನಾಲೆಗೆ 1200 ಕ್ಯುಸೆಕ್ ನೀರನ್ನು ಹರಿಸಲಾಗಿತ್ತು. ಪ್ರಸಕ್ತ ಜಲಾಶಯಕ್ಕೆ 42603 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 1180 ಕ್ಯುಸೆಕ್‍ನಷ್ಟಿತ್ತು.







