ಕೊಡಗು ಪ್ರವಾಹ ಸಂತ್ರಸ್ತರಿಗೆ ಬೆಂಗಳೂರಿನ ಬಿಜೆಪಿ ಶಾಸಕರು-ಬಿಬಿಎಂಪಿ ಸದಸ್ಯರ ಎರಡು ತಿಂಗಳ ವೇತನ: ಆರ್.ಅಶೋಕ್

ಬೆಂಗಳೂರು, ಆ. 19: ಮಳೆ-ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆ ಜನರಿಗೆ ಬೆಂಗಳೂರಿನ ಬಿಜೆಪಿ ಶಾಸಕರು ಮತ್ತು ಬಿಬಿಎಂಪಿ ಸದಸ್ಯರ ಎರಡು ತಿಂಗಳ ವೇತನ ಹಾಗೂ ಇತರೆ ಪದಾಧಿಕಾರಿಗಳು ತಲಾ 10 ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ತಿಳಿಸಿದ್ದಾರೆ.
ರವಿವಾರ ಪಕ್ಷದ ಕಚೇರಿಯಲ್ಲಿ ಮಳೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳ ರವಾನೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶತಮಾನದಲ್ಲೇ ಕಂಡರಿಯದ ಭೀಕರ ಮಳೆಯಿಂದ ಸಾವು-ನೋವು ಸಂಭವಿಸಿ ಮಡಿಕೇರಿ ಜಿಲ್ಲೆಯ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆ ಜನರಿಗೆ ಅಗತ್ಯ ಆಹಾರ ಪದಾರ್ಥಗಳು, ಬಟ್ಟೆ ಸೇರಿದಂತೆ ಇನ್ನಿತರ ಸಾಮಗ್ರಿಗಳ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ಸಂಘ-ಸಂಸ್ಥೆಗಳು ಸೇರಿದಂತೆ ಮತ್ತಿತರರಿಂದ ಪಕ್ಷದ ಪ್ರಮುಖರು ದೇಣಿಗೆಯನ್ನು ಸಂಗ್ರಹಿಸಬೇಕು ಎಂದು ಅವರು ಸೂಚಿಸಿದರು.
ಸಂತ್ರಸ್ತರಿಗೆ ಔಷಧೋಪಾಚಾರ, ಬಟ್ಟೆ, ಕುಡಿಯುವ ನೀರಿನ ಬಾಟಲ್, ಆಹಾರ ಪೂಟ್ಟಣಗಳು, ಹೊದಿಕೆಗಳು, ಹಾಸಿಗೆ, ತಲೆದಿಂಬು, ಬ್ಯಾಟರಿ ಸೇರಿದಂತೆ ಕೆಲವು ಅಗತ್ಯ ವಸ್ತುಗಳನ್ನು ಒದಗಿಸಬೇಕು. ಜನತೆ ಸ್ವಯಂಪ್ರೇರಿತರಾಗಿ ದೇಣಿಗೆ ನೀಡಲು ಬಂದರೆ ಅದನ್ನು ಸಂಗ್ರಹಿಸಿ ಕಚೇರಿಗೆ ತಲುಪಿಸಬೇಕೆಂದು ತಿಳಿಸಿದರು.
ಇಂದು ನಡೆದ ಸಭೆಯಲ್ಲಿ ಬಿಬಿಎಂಪಿ ಸದಸ್ಯರು ಮತ್ತು ಶಾಸಕರು ನೀಡಿರುವ ನೆರವು ಒಟ್ಟು 11.56 ಲಕ್ಷ ರೂ.ಗಳು. ಕೊಡಗಿನ ಶಾಸಕರೊಂದಿಗೆ ಸಂಪರ್ಕದಲ್ಲಿದ್ದು ಅಲ್ಲಿನ ಅಗತ್ಯತೆ ತಿಳಿದು ನೆರವು ಒದಗಿಸಲಾಗುವುದೆಂದು ಅಶೋಕ್ ಹೇಳಿದರು. ಸಭೆಯಲ್ಲಿ ವಿ.ಸೋಮಣ್ಣ, ತೇಜಸ್ವಿನಿ ಗೌಡ, ಮಾಜಿ ಸದಸ್ಯೆ ತಾರಾ, ಮುನಿರಾಜು, ಮಂಜುಳಾ, ಸುಬ್ಬಣ್ಣ, ಪದ್ಮನಾಭ ರೆಡ್ಡಿ ಹಾಜರಿದ್ದರು.







